ನವದೆಹಲಿ, ಜು 01(DaijiworldNews/PY): ಎಲ್ಲರ ಕಠಿಣ ಪರಿಶ್ರಮದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೊನಾ ಹರಡದಂತೆ ಹತೋಟಿಗೆ ತರಲು ಸಾಧ್ಯವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.
ಜೂನ್ ಅಂತ್ಯದವರೆಗೆ ದೆಹಲಿಯಲ್ಲಿ 1 ಲಕ್ಷ ಕೊರೊನಾ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದ್ದು, ಸಕ್ರಿಯ ಪ್ರಕರಣಗಳು ಕೂಡಾ 60,000ಕ್ಕೆ ಏರಿಕೆಯಾಗುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಆದರೆ ಇಂದು ನಮ್ಮಲ್ಲಿ ಕೇವಲ 26,000 ಕ್ರಿಯಾಶೀಲ ಪ್ರಕರಣಗಳಿವೆ. ಇದು ಪ್ರತಿಯೊಬ್ಬರ ಕಠಿಣ ಪರಿಶ್ರಮದ ಫಲವಾಗಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಇದು ಒಂದು ನಿರ್ಣಾಯಕ ಪರಿಸ್ಥಿತಿಯಾಗಿತ್ತು. ಆದರೆ, ನಾವು ಪ್ರಯತ್ನವನ್ನು ಬಿಡಲಿಲ್ಲ. ನಮಗೆ ಯಾರು ನೆರವಾಗುತ್ತಾರೋ ಅವರೊಂದಿಗೆ ಸಹಾಯ ಕೇಳಿದ್ದೆವು. ಜೂನ್ 30 ವೇಳೆ ಇಷ್ಟು ಪ್ರಕರಣಗಳನ್ನು ತಲುಪುತ್ತೇವೆ ಎಂದು ಜನರ ಮುಂದಿಟ್ಟಿದ್ದೆವು ಎಂದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೆಹಲಿಯಲ್ಲಿ ಒಟ್ಟು 87,360 ಕೊರೊನಾ ಪ್ರಕರಣಗಳಿದ್ದು, ಆ ಪೈಕಿ 26,270 ಸಕ್ರಿಯ ಪ್ರಕರಣಗಳಿವೆ. 58,348 ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸೋಂಕಿಗೆ 2,742 ರೋಗಿಗಳು ಸಾವನ್ನಪ್ಪಿದ್ದಾರೆ.