ಬೆಂಗಳೂರು, ಜು 01 (Daijiworld News/MSP): 26 ವರ್ಷಗಳ ಕಾಲ ಭೂಗತ ಜಗತ್ತನ್ನು ಆಳಿ, ಸೆನಗಲ್ ನಲ್ಲಿ ತಲೆಮರೆಸಿಕೊಂಡು ಬಳಿಕ ಪೊಲೀಸ್ ಬಲೆಗೆ ಬಿದ್ದಿರುವ ಕುಖ್ಯಾತ ಅಂಡರ್ ವರ್ಲ್ಡ್ ಡಾನ್ ರವಿ ಪೂಜಾರಿ ಬಂಧಿಯಾಗಿ ನಾಲ್ಕು ತಿಂಗಳು ಕಳೆದಿವೆ. ಹಲವು ಪ್ರಕರಣಗಳ ವಿಚಾರಣೆಯಲ್ಲಿರುವ ಆತ ಇದೀಗ "ನಾನೊಮ್ಮೆ ನನ್ನ ಕುಟುಂಬಸ್ಥರನ್ನು ನೋಡಬೇಕು, ಅವರನ್ನು ಒಮ್ಮೆ ಕರೆತನ್ನಿ "ಎಂದು ಪೊಲೀಸರ ಮುಂದೆ ಗೋಗರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ.
ಪೂಜಾರಿ ತನ್ನ ಹೆಂಡತಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಮಗನನ್ನ ನೆನೆದು ಭಾವುಕನಾಗಿದ್ದಾನೆ ಅವರನ್ನೊಮ್ಮೆ ನೋಡಬೇಕು ಎಂದು ಹೇಳತೊಡಗಿದ್ದಾನೆ, ಭೂಗತ ದೊರೆಯಾಗಿ ಬದುಕುತ್ತಿದ್ದಾಗ ಬೆಂಗಳೂರಿನಲ್ಲಿ ಸಾಕಷ್ಚು ಜನ ತನ್ನ ಸ್ನೇಹಿತರಿದ್ದರು. ಆದರೆ ಬಂಧನವಾದ ಬಳಿಕ ಯಾರೂ ಬಂದು ತನ್ನನ್ನು ಒಮ್ಮೆಯೂ ಭೇಟಿಗೂ ಪ್ರಯತ್ನಿಸಿಲ್ಲ ಎಂದು ಜೈಲು ಅಧಿಕಾರಿಗಳ ಬಳಿ ಪೂಜಾರಿ ಬೇಸರ ವ್ಯಕ್ತಪಡಿಸಿದ್ದಾನೆ
ಇನ್ನು ಹಳೆಯ ಪ್ರಕರಣದ ಬಗ್ಗೆ ಇತನನ್ನು ವಿಚಾರಿಸತೊಡಗಿದರೆ, ಅದ್ಯಾವುದು ನನಗೆ ನೆನಪಿಲ್ಲ ಎಂದು ತನ್ನ ಮೇಲಿರುವ ಆರೋಪಗಳ ಪಟ್ಟಿಯನ್ನು ಕೇಳಿ ದಂಗು ಬಡಿದಿದ್ದಾನೆ.