ತಿರುವನಂತಪುರ, ಜು 01(DaijiworldNews/PY): ಬಿಎಸ್ಎನ್ಎಲ್ನ ಮಾಜಿ ಉದ್ಯೋಗಿ ಹಾಗೂ ಕಾರ್ಯಕರ್ತೆ ರೆಹನಾ ಫಾತಿಮಾ ಅವರನ್ನು ಕೊಚ್ಚಿಯಲ್ಲಿರುವ ವಸತಿ ನಿಲಯದಿಂದ ಖಾಲಿ ಮಾಡುವಂತೆ ಸೂಚಿಸಿ ಬಿಎಸ್ಎನ್ಎಲ್ ನೋಟಿಸ್ ನೀಡಿದೆ.
ಮಕ್ಕಳನ್ನು ತನ್ನ ದೇಹದ ಮೇಲೆ ಚಿತ್ರ ರಚಿಸಲು ಬಳಸಿಕೊಂಡ ಆರೋಪದಲ್ಲಿ ಇತ್ತೀಚಿಗೆ ಹೋರಾಟಗಾರ್ತಿ ರೆಹಾನಾ ಫಾತಿಮಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು.
ನಗರದ ಪೊಲೀಸರು ಪೋಕ್ಸೋ ಕಾಯ್ದೆ ಹಾಗೂ ಐಟಿ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದ ತನಿಖೆಯ ಭಾಗವಾಗಿ ಜೂನ್ 25ರಂದು ಪನಂಪಳ್ಳಿ ನಗರದ ಬಿಎಸ್ಎನ್ಎಲ್ ಕ್ವಾಟರ್ಸ್ನಲ್ಲಿರುವ ಆಕೆಯ ಮನೆಯನ್ನು ಪೊಲೀಸರು ಶೋಧ ನಡೆಸಿದ್ದರು. ಆದರೆ, ರೆಹನಾ ಫಾತಿಮಾ ನಾಪತ್ತೆಯಾಗಿದ್ದಳು.
ಸಾಮಾಜಿಕ ಜಾಲತಾಣದಲ್ಲಿ, ದೇಹ ಹಾಗೂ ರಾಜಕೀಯ ಎಂದು ವಿಡಿಯೋವನ್ನು ಪೋಸ್ಟ್ ಮಾಡಿದ್ದ ಕಾರಣ ಕೇರಳ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.
ರೆಹನಾ ಫಾತಿಮಾ ಮಾಡಿದ ಈ ಘಟನೆಯಿಂದ ಬಿಎಸ್ಎನ್ಎಲ್ಗೆ ಅಪಮಾನವಾಗಿದೆ. ಆದ್ದರಿಂದ ಈ ನೋಟಿಸ್ ಸ್ವೀಕರಿಸಿದ ದಿನದಿಂದ 30 ದಿನಗಳಲ್ಲಿ ವಸತಿ ನಿಲಯವನ್ನು ಖಾಲಿ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಖಾಲಿ ಮಾಡದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನೋಟಿಸ್ನಲ್ಲಿ ತಿಳಿಸಿದ್ದಾರೆ.
ರೆಹಾನಾ ಫಾತಿಮಾ, ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧವನ್ನು 2018ರಲ್ಲಿ ಸುಪ್ರೀಂ ಕೋರ್ಟ್ ತೆರವು ಮಾಡಿದ ಬಳಿಕ ದೇಗುಲ ಪ್ರವೇಶಕ್ಕೆ ಮುಂದಾಗಿದ್ದರು. ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ಇವರ ಮೇಲೆ ಪ್ರಕರಣವನ್ನು ದಾಖಲು ಮಾಡಲಾಗಿತ್ತು. ನಂತರ ಬಿಎಸ್ಎನ್ಎಲ್ ಕೆಲಸದಿಂದ ಅಮಾನತು ಮಾಡಿತ್ತು.