ನವದೆಹಲಿ, ಜು 01(DaijiworldNews/PY): ವ್ಯಾಪಾರ ಹಾಗೂ ವ್ಯವಹಾರಕ್ಕಾಗಿ ಚೀನಾ ಹಾಗೂ ಚೀನಾದ ಕಂಪೆನಿಗಳೊಂದಿಗೆ ಮಾಡಿಕೊಂಡಿರುವ ಎಲ್ಲಾ ಒಪ್ಪಂದಗಳನ್ನು ರದ್ದುಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ಕೋರಿ ಸುಪ್ರೀಂ ಕೋರ್ಟ್ನಲ್ಲಿ ಪಿಐಎಲ್ ಸಲ್ಲಿಸಲಾಗಿದೆ.
ಜಮ್ಮುವಿನ ವಕೀಲರಾದ ಅರ್ಜಿದಾರರಾದ ಸುಪ್ರಿಯಾ ಪಂಡಿತಾ ಅವರು ಚೀನಾ ಸರ್ಕಾರದೊಂದಿಗೆ ತನ್ನ ವ್ಯಾಪಾರ ನೀತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲು ಕೇಂದ್ರಕ್ಕೆ ನಿರ್ದೇಶನ ಕೋರಿದ್ದು, ಮುದ್ರಾದಲ್ಲಿ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಲು ಚೀನಾ ಹಾಗೂ ಅದಾನಿ ಗ್ರೂಪ್ ಆಫ್ ಕಂಪೆನಿಗಳ ನಡುವೆ ಸಹಿ ಹಾಕಿದ ಒಪ್ಪಂದವನ್ನು ಕೂಡಾ ಅರ್ಜಿದಾರರು ಉಲ್ಲೇಖಿಸಿದ್ದಾರೆ.
ವ್ಯಾಪಾರ ಹಾಗೂ ವ್ಯವಹಾರಕ್ಕಾಗಿ ಮಾಡಿರುವ ಇಂತಹ ಒಪ್ಪಂದಗಳು ಅನಿಯಂತ್ರಿತ ಹಾಗೂ ಭಾರತದ ಜನರ ಇಚ್ಛಾಶಕ್ತಿ ಹಾಗೂ ಭಾವನೆಗಳಿಗೆ ಇದು ವಿರುದ್ದವಾಗಿದೆ. ಆದರೆ, ಇದು ಪ್ರಧಾನಿ ಮೋದಿ ಅವರ ಆತ್ಮ ನಿರ್ಭರ್ ನೀತಿಗೂ ವಿರುದ್ದವಾಗಿದೆ ಎಂದಿದ್ದಾರೆ.
ಕೇಂದ್ರವು, ಚೀನಾದ 59 ಮೊಬೈಲ್ ಆಪ್ಗಳನ್ನು ನಿಷೇಧಿಸಿದರೂ, ಕೆಲವು ಆಯ್ದ ವ್ಯಾಪಾರ ಸಂಸ್ಥೆಗಳಿಗೆ ಚೀನಾ ಮತ್ತು ಅದರ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡುವುದು ತಾರತಮ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಚೀನಾದ ಸರ್ಕಾರಕ್ಕೆ ಏಕರೂಪದ ವ್ಯಾಪಾರ ನೀತಿಯನ್ನು ಜಾರಿಗೆ ತರಲು ಇದು ಸಮಯದ ಅವಶ್ಯಕತೆಯಾಗಿದೆ. ಏಕೆಂದರೆ ಭದ್ರತಾ ಬೆದರಿಕೆ ಮತ್ತು ರಾಷ್ಟ್ರೀಯ ಭದ್ರತಾ ನೀತಿಯನ್ನು ಕೆಲವು ಘಟಕದ ಪರವಾಗಿ ಮತ್ತು ಇತರರಿಗೆ ತಾರತಮ್ಯವನ್ನು ಮಾಡಲು ಸಾಧ್ಯವಿಲ್ಲ ಎಂದು ಅರ್ಜಿದಾರರು ಮನವಿಯಲ್ಲಿ ವಾದಿಸಿದ್ದಾರೆ.