ಬೆಂಗಳೂರು, ಜು 01 (Daijiworld News/MSP): ರಾಜ್ಯದಲ್ಲಿ ಏರುಗತಿಯಲ್ಲಿ ಸಾಗುತ್ತಿರುವ ಸೋಂಕು ನಿಯಂತ್ರಣ ಕುರಿತಂತೆ ಇಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸೇರಿದಂತೆ ತಜ್ಞ ವೈದ್ಯರ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯ ಬಳಿಕ ಮಾತನಾಡಿ ಮಾಹಿತಿ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಕೋವಿಡ್ 19 ನಿರ್ವಹಣೆ ಕುರಿತು ತಜ್ಞ ವೈದ್ಯರೊಂದಿಗಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಈ ವೇಳೆ ಅನೇಕ ಸಲಹೆಗಳನ್ನು ನೀಡಿದ್ದಾರೆ ಎಂದರು.
ರೋಗ ಲಕ್ಷಣ ಇಲ್ಲದ ಅಥವಾ ಅತ್ಯಂತ ಕಡಿಮೆ ಜ್ವರದ ಲಕ್ಷಣಗಳಿದ್ದರೆ, ಅವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಿ (ಹೋಮ್ ಐಸೋಲೇಷನ್), ಅವರ ಆರೋಗ್ಯದ ಮೇಲೆ ನಿಗಾ ಇಡಬೇಕು ಎಂದು ತಜ್ಞ ವೈದ್ಯರು ಸಲಹೆ ನೀಡಿದ್ದಾರೆ.
ರೋಗ ಲಕ್ಷಣ ಇಲ್ಲದವರಿಗೆ ಹೋಮ್ ಐಸೋಲೇಷನ್ ಮೂಲಕ ಆರೋಗ್ಯದ ಮೇಲೆ ನಿಗಾ ಇಡುವುದರಿಂದ ಆಸ್ಪತ್ರೆಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹುತೇಕ ತಜ್ಞರು ಅಭಿಪ್ರಾಯಪಟ್ಟರು. ಟೆಲಿ ಮೆಡಿಸಿನ್ ವ್ಯವಸ್ಥೆಯ ಮೂಲಕ ಹೆಚ್ಚಿನ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ
ಸೋಂಕಿತರ ಸಂಪರ್ಕ ಪತ್ತೆ ಹಚ್ಚಲು ಹೆಚ್ಚುವರಿ ಮಾನವ ಸಂಪನ್ಮೂಲ ಅಗತ್ಯವಿದ್ದು, ಇದಕ್ಕಾಗಿ ಇತರ ಇಲಾಖೆಯ ಸಿಬ್ಬಂದಿ ಸೇವೆ ಬಳಸಿಕೊಳ್ಳಬೇಕು. ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಸರಪಣಿ ಹಾಗೂ ಹೊಸ ಔಷಧಿಗಳ ಪೂರೈಕೆ ಸಮಸ್ಯೆ ರಹಿತವಾಗಿರಬೇಕು ಎಂಬಿತ್ಯಾದಿ ಸಲಹೆ ನೀಡಿದ್ದಾರೆ ಎಂದು ವಿವರಿಸಿದ್ದಾರೆ.