ತೂತುಕುಡಿ, ಜು 02 (Daijiworld News/MSP): ತಮಿಳುನಾಡಿನಲ್ಲಿ ತೂತುಕುಡಿಯ ತಂದೆ ಪಿ ಜಯರಾಜ್-ಮಗ ಬೆನಿಕ್ಸ್ ಲಾಕಪ್ ಡೆತ್ ಪ್ರಕರಣ ದೇಶದಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದು, ಜನಾಕ್ರೋಶ ಹೆಚ್ಚಾಗುತ್ತಿದ್ದಂತೆ ಈ ಘಟನೆಯನ್ನು ತಮಿಳುನಾಡು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಇದರ ಬೆನ್ನಲ್ಲೇ ಸಿಐಡಿ ಅಧಿಕಾರಿಗಳು ಸತ್ತಾನ್ಕುಲಂ ಪೊಲೀಸ್ ಠಾಣೆಯ ಎಸ್ಐ ರಘು ಗಣೇಶ್ ಹಾಗೂ ಮುಖ್ಯ ಪೇದೆ ಮುರುಗನ್ ಎಂಬುವವರನ್ನು ಬಂಧನಕ್ಕೊಳಪಡಿಸಿ ಆರು ಮಂದಿಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
ಲಾಕ್'ಡೌನ್ ವೇಳೆ ತಮ್ಮ ಮೊಬೈಲ್ ಅಂಗಡಿ ತೆರೆದು ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಪೊಲೀಸರು ಆರೋಪಿಸಿ ತಂದೆ ಮಗನನ್ನು ಪಡೆದುಕೊಂಡಿದ್ದರು. ಈ ವೇಳೆ ಪೊಲೀಸರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಸಾವಿಗೀಡಾಗಿದ್ದರು. . ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ತಮಿಳುನಾಡು ಸರ್ಕಾರ ಸಿಬಿ-ಸಿಐಡಿ ತನಿಖೆಗೆ ವಹಿಸಿತ್ತು. ಇದರಂತೆ ತನಿಖಾಧಿಕಾರಿಗಳು ಬುಧವಾರ ಐಪಿಸಿ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು
ಬಂಧನಕ್ಕೊಳಗಾಗಿರುವ ಗಣೇಶ್ ಅವರನ್ನು ತೂತುಕುಡಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಸ್ ಹೇಮಾ ಅವರ ಮುಂದೆ ಹಾಜರುಪಡಿಸಲಾಗಿದ್ದು, ಪೆರುರಾಣಿ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಎಸ್ಐ ರಘು ಗಣೇಶ್ರನ್ನು ಬಂಧಿಸಿಲಾಗಿದೆ ಎಂಬ ಸುದ್ದಿ ತಿಳಿಯುತ್ತಲೇ ಸತ್ತಾನ್ಕುಲಂನ ನಿವಾಸಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.