ಬೆಂಗಳೂರು, ಜು 02(DaijiworldNews/PY): ಕನ್ನಡ ಸಿನಿಮಾಗಳಲ್ಲಿ ಹಾಸ್ಯಪಾತ್ರಗಳು ಹಾಗೂ ಮಿಮಿಕ್ರಿ ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ನಟ ಮಿಮಿಕ್ರಿ ರಾಜಗೋಪಾಲ್ (69) ಅವರು ಗುರುವಾರ ನಿಧನರಾಗಿದ್ದಾರೆ.
ರಾಜಗೋಪಾಲ್ ಅವರು ಕೆಲವು ಸಮಯಗಳ ಹಿಂದೆ ಕಿಡ್ನಿ ಹಾಗೂ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದು, ಅವರು ಬೆಂಗಳೂರಿನ ಕೆಂಗೇರಿಯ ಸಮೀಪದ ತಮ್ಮ ಮನೆಯಲ್ಲಿ ವಿಧಿವಶರಾಗಿದ್ದಾರೆ.
ಹಾಸ್ಯ ನಟರಾಗಿ, ಮಿಮಿಕ್ರಿ ಕಲಾವಿದರಾಗಿ ಹಾಗೂ ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ಅವರು ಸುಮಾರು 650ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಅಲ್ಲದೇ, ತಮಿಳು ಚಿತ್ರಗಳಲ್ಲಿಯೂ ಕೂಡಾ ಬಣ್ಣಹಚ್ಚಿದ್ದರು.
1983ರಿಂದ ರಾಜಗೋಪಾಲ್ ಅವರು ಬಣ್ಣದ ಬದುಕಿನಲ್ಲಿದ್ದಾರೆ. ಡಿಡಿ 1 ಆರಂಭವಾದಾಗಿನಿಂದ ಪಾಪ ಪಾಂಡುವರೆಗೂ ಸುಮಾರು ಧಾರಾವಾಹಿಗಳಲ್ಲಿ ಅಭಿನಯಿಸಿದ್ದು, ಮಿಮಿಕ್ರಿ ಕಲಾವಿದರೆಂದೇ ಗುರುತಿಸಿಕೊಡಿದ್ದ ಇವರು ವಿವಿಧ ಕಲಾವಿದರ ಧ್ವನಿಗಳನ್ನು ಅನುಕರಣೆ ಮಾಡುತ್ತಿದ್ದರು. ಇವರು ನಟಿ ಕಲ್ಪನಾ ಅವರ ಧ್ವನಿಯನ್ನು ಅನುಕರಣೆ ಮಾಡುವುದರ ಮೂಲಕ ಹೆಸರು ಪಡೆದಿದ್ದರು.
ರಾಜಗೋಪಾಲ್ ಅವರು, ಕಾಪಿಕಟ್ಟೆ, ರಿಯಲ್ ಪೊಲೀಸ್, ಸಾಧಕರು, ಗೋಸಿ ಗ್ಯಾಂಗ್, ಸೂಪರ್ ಪೊಲೀಸ್ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.