ಬೆಂಗಳೂರು,ಜು 02 (Daijiworld News/MSP): ಬೃಹತ್ ವರ್ಚುವಲ್ ರ್ಯಾಲಿ ಮೂಲಕ ಕರ್ನಾಟಕ ಕಾಂಗ್ರೆಸ್ ನ 41ನೇ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಗುರುವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.
ದೇಶ ಎದುರಿಸುತ್ತಿರುವ ತುರ್ತು ಆರೋಗ್ಯ ಪರಿಸ್ಥಿತಿ ಸಂದರ್ಭದಲ್ಲಿ ಮತ್ತು ರಾಜ್ಯ ರಾಜಕಾರಣದ ಅದರಲ್ಲೂ ಕಾಂಗ್ರೆಸ್ ನ ಸಂಕ್ರಮಣ ಕಾಲಘಟ್ಟದಲ್ಲಿ ಹಿರಿಯ ನಾಯಕ ಡಿ.ಕೆ ಶಿವಕುಮಾರ್ ಪಕ್ಷದ ಅಧ್ಯಕ್ಷರಾಗಿ ಡಿಜಿಟಲ್ ಸಮಾವೇಶದ ಮೂಲಕ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.
ನವ ದೃಷ್ಟಿಕೋನ, ನವ ಚೈತನ್ಯ, ನವ ಕರ್ನಾಟಕ ಮತ್ತು ಪರಿಕಲ್ಪನೆಯಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಗುಂಡೂರಾವ್ ಜವಾಬ್ದಾರಿಯನ್ನು ಹೊಸ ತಂಡಕ್ಕೆ ಹಸ್ತಾಂತರಿಸಿದರು.
ರಾಜ್ಯದ ವಿವಿಧೆಡೆ 7,800 ಸ್ಥಳಗಳಲ್ಲಿ ಎಲ್ಇಡಿ ಮೂಲಕ ನೇರ ಪ್ರಸಾರ ಹಾಗೂ ಝೂಮ್ ಕಾನ್ಫರೆನ್ಸ್ ಮೂಲಕ 100ಕ್ಕೂ ಹೆಚ್ಚು ಫೇಸ್ಬುಕ್ ಖಾತೆಗಳಿಂದ ಲೈವ್ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸುವುದರ ಮೂಲಕ ಪದಗ್ರಹಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.