ಬೆಂಗಳೂರು, ಜು 02(DaijiworldNews/PY): ನಾನು ರೈತನ ಮಗನಾಗಿದ್ದು, ನಮ್ಮ ಜಮೀನಿನಲ್ಲಿ ವ್ಯವಸಾಯ ನಡೆಸಬೇಕೆಂದು ನಿರ್ಧರಿಸಿ ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಅವರು, ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾದ್ದರಿಂದ ರೈತ ದೇಶದ ಬೆನ್ನೆಲುಬು ಎಂದು ಅವರಿಗೆ ಗೌರವ ಸಲ್ಲಿಸುತ್ತೇವೆ. ಆದರೆ, ರೈತರ ಮಕ್ಕಳು ಕೃಷಿಭೂಮಿಯಲ್ಲಿ ದುಡಿಮೆ ಮಾಡಲು ಹಿಂಜರಿದು ಬದುಕು ಕಟ್ಟಿಕೊಳ್ಳಲು ನಗರದ ಕಡೆ ವಲಸೆ ಹೋಗುತ್ತಾರೆ. ಇದರಿಂದಾಗಿ ಹಳ್ಳಿಗಳಲ್ಲಿರುವ ಕೃಷಿಭೂಮಿಗಳು ಪಾಳು ಬೀಳುತ್ತಿವೆ. ನಗರದಲ್ಲಿ ವೃತ್ತಿ ಸ್ಪರ್ಧೆ ತಾರಕಕ್ಕೇರಿದೆ ಎಂದಿದ್ದಾರೆ.
ಡಾಕ್ಟರ್ ತನ್ನ ಮಗ ಡಾಕ್ಟರ್ ಆಗಲಿ, ಪೊಲೀಸ್ನ ಮಗ ನನ್ನಂತೆ ಪೊಲೀಸ್ ಆಗಬೇಕು ಎಂದೆಲ್ಲಾ ಆಸೆ ಪಡುತ್ತಾರೆ. ಆದರೆ ಒಬ್ಬ ನಮ್ಮ ದೇಶದ ರೈತ ತನ್ನ ಮಗನೂ ರೈತನಾಗಬೇಕು ಎಂದು ಬಯಸದ ಪರಿಸ್ಥಿತಿ ಎದುರಾಗಿದೆ. ತನ್ನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಷ್ಟಪಟ್ಟು ಸಾಲ ಮಾಡಿಯಾದರೂ ನಗರಗಳಿಗೆ ಕಳುಹಿಸುತ್ತಾರೆ. ತಾನು ಏನೇ ಬೆಳೆ ಬೆಳೆದರೂ ರೈತನಿಗೆ ಬೆಳೆಯ ಬೆಲೆ ನಿಗಧಿ ಮಾಡುವುದಕ್ಕೂ ಆತನಿಗೆ ಅಧಿಕಾರವಿಲ್ಲ. ಜೀವಮಾನವಿಡೀ ರೈತ ದುಡಿದು ಬದುಕುತ್ತಿದ್ದಾನೆ. ಹಾಗಾಗಿ ಈ ದೇಶದಲ್ಲಿ ಮೊದಲ ಗೌರವ ರೈತನಿಗೆ ಸಿಗಬೇಕು. ಅಲ್ಲದೇ, ಸರ್ಕಾರಿ ಅಧಿಕಾರಿಗಳ ಹಾಗೂ ಬ್ಯಾಂಕ್ ನೌಕರರ ಕಚೇರಿಗೆ ರೈತರು ಬಂದಾಗ ಅವರನ್ನು ಗೌರವದಿಂದ ಕಾಣಬೇಕು ಎಂದು ಹೇಳಿದ್ದಾರೆ.
ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭ ಏನೇ ನೋವು ಎದುರಾದರೂ ಅದನ್ನು ಲೆಕ್ಕಿಸದೇ ಅದೇ ಜಮೀನಿನಲ್ಲಿ ಕೆಲಸ ಮಾಡುವ ರೈತನಿಗೆ ಘನತೆಯೆಂಬ ಬದುಕನ್ನು ಕಟ್ಟಿಕೊಡಬೇಕಿದೆ. ಕೃಷಿ ಭೂಮಿಯಲ್ಲಿ ರೈತರ ಮಕ್ಕಳು ಕೆಲಸ ಮಾಡುವುದು ಗೌರವ ಎನ್ನುವಂತಾಗಬೇಕು. ರೈತನಾಗಿ ಬದುಕುವುದು ಸೌಭಾಗ್ಯ ಎನ್ನುವ ಪರಿಸ್ಥಿತಿ ನಿರ್ಮಾಣವಾಗಬೇಕು ಎಂದು ತಿಳಿಸಿದ್ದಾರೆ.
ಕೆಲವರು ನಗರದಿಂದ ಹಳ್ಳಿಗಳಿಗೆ ವಾಪಾಸ್ಸಾಗಿ ತಮ್ಮ ಕೃಷಿಭೂಮಿಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ನಿಮಗೆಲ್ಲರಿಗೂ ಯಶಸ್ಸು ಲಭಿಸಲಿ. ನಾನು ರೈತನ ಮಗ ಎಂದು ಹೆಮ್ಮೆಯಿಂದ ಹೇಳಿಕೊಳ್ಳಿ. ವ್ಯವಸಾಯ ಮಾಡಲು ವಿದ್ಯಾಭ್ಯಾಸವಿರುವ ಯುವಕರು ಜಮೀನಿಗಿಳಿದರೆ ಮಧ್ಯವರ್ತಿಗಳ ಕಾಟವು ಕಡಿಮೆಯಾಗುತ್ತದೆ. ವ್ಯವಸಾಯಕ್ಕಾಗಿ ಆಧುನಿಕ ತಂತ್ರಜ್ಞಾನಗಳನ್ನು ಕೂಡ ಉಪಯೋಗಿಸಿಕೊಳ್ಳಬಹುದು. ಕೃಷಿಯಲ್ಲೇ ಉನ್ನತ ಪದವಿ ಗಳಿಸಿದರೆ ದೇಶದ ಕೃಷಿಯನ್ನು ರೈತರ ಮಕ್ಕಳೇ ನಿರ್ಧಾರ ಮಾಡುವಂತಾಗಲಿ ಎಂದಿದ್ದಾರೆ.
ನಾನೂ ಕೂಡಾ ರೈತನ ಮಗ. ನಾನು ಸಹ ನಮ್ಮ ಜಮೀನಿನಲ್ಲಿ ವ್ಯವಸಾಯ ಮಾಡಲು ನಿರ್ಧರಿಸಿದ್ದು, ನಮ್ಮ ತೋಟದಲ್ಲಿ ಕೃಷಿ ಚಟುವಟಿಕೆಗಳನ್ನು ಪ್ರಾರಂಭಿಸಿದ್ದೇನೆ. ಇದೇ ರೀತಿ ನಗರಗಳಿಂದ ಹಳ್ಳಿಗೆ ವಾಪಾಸ್ಸಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ರೈತರ ಮಕ್ಕಳಿಗೂ ಯಶಸ್ಸು ಸಿಗಲಿ ಎಂದಿದ್ದಾರೆ.
ನಮ್ಮ ದೇಶ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತ ಈ ದೇಶದ ಬೆನ್ನೆಲುಬು ಎಂದು ಗೌರವ ಸಲ್ಲಿಸುತ್ತೇವೆ. ಆದರೆ ರೈತರ ಮಕ್ಕಳು ರೈತರಾಗಿ ಅವರ...
Posted by Nikhil Gowda on Wednesday, 1 July 2020