ಕಲಬುರ್ಗಿ, ಜು. 02 (DaijiworldNews/MB) : ''ಅಧ್ಯಕ್ಷರಾದವರ ತಾಕತ್ ಏನು ಎಂದು ತಿಳಿದಿದೆ. ಅವರು ನಮ್ಮ ಮಿತ್ರರಲ್ಲ'' ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು, ಕೆಪಿಸಿಸಿ ಅಧ್ಯಕ್ಷರಾಗಿ ಗುರುವಾರ ಅಧಿಕಾರಿ ಸ್ವೀಕರಿಸಿದ ಡಿ ಕೆ ಶಿವಕುಮಾರ್ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಅಫಜಲಪುರ ತಾಲ್ಲೂಕಿನ ಸೊನ್ನಾ ಬ್ಯಾರೇಜಗೆ ಗುರುವಾರ ಭೇಟಿ ನೀಡಿದ ಬಳಿಕ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಪದಗ್ರಹಣ ಕಾರ್ಯಕ್ರಮಕ್ಕೆ ಒಂದೇ ಕಡೆ 10 ಲಕ್ಷ ಜನರನ್ನು ಸೇರಿಸಿ ಅವರ ತಾಕತ್ತು ತೋರಿಸಬೇಕು. ಬದಲಾಗಿ ಟಿವಿಯಲ್ಲಿ 10 ಲಕ್ಷ ಜನರು ವೀಕ್ಷಿಸುತ್ತಿದ್ದಾರೆ ಎಂದು ಹೇಳಿಕೊಳ್ಳುವುದಲ್ಲ. ಅದಕ್ಕೆ ಹೆಚ್ಚು ಮಹತ್ವವನ್ನು ನೀಡಬೇಕಾಗಿಲ್ಲ'' ಎಂದು ಲೇವಡಿ ಮಾಡಿದರು.
ಬೃಹತ್ ವರ್ಚುವಲ್ ರ್ಯಾಲಿ ಮೂಲಕ ಕರ್ನಾಟಕ ಕಾಂಗ್ರೆಸ್ ನ 41ನೇ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಗುರುವಾರ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿ ಸಭಾಂಗಣದಲ್ಲಿ ಅಧಿಕಾರ ಸ್ವೀಕರಿಸಿದ್ದಾರೆ.