ನವದೆಹಲಿ, ಜು 02 (Daijiworld News/MSP): ದೇಶದ ಮೊತ್ತ ಮೊದಲ ಪ್ಲಾಸ್ಮಾ ಬ್ಯಾಂಕ್ ನವದೆಹಲಿಯ ಐಎಲ್ಬಿಎಸ್ ಆಸ್ಪತ್ರೆಯಲ್ಲಿ ಕಾರ್ಯಾರಂಭವಾಗಿದೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ಲಾಸ್ಮಾ ಬ್ಯಾಂಕ್ ಉದ್ಘಾಟಿಸಿ ಕೊರೊನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡವರು ಸ್ವಯಂಪ್ರೇರಿತರಾಗಿ ಪ್ಲಾಸ್ಮಾ ದೇಣಿಗೆ ನೀಡುವಂತೆ ಪ್ಲಾಸ್ಮಾ ದಾನ ನೀಡುವಂತೆ ವಿನಂತಿಸಿದರು.
ಉದ್ಘಾಟನೆಯ ಬಳಿಕ ಮಾತನಾಡಿದ ಕೇಜ್ರಿವಾಲ್ "ನೀವು COVID-19 ನಿಂದ ಚೇತರಿಸಿಕೊಂಡಿದ್ದು ನಿಮ್ಮ ವಯಸ್ಸು 18 ರಿಂದ 60 ರ ನಡುವೆ ಇದ್ದರೆ ಮತ್ತು ನಿಮ್ಮ ತೂಕವು 50 ಕೆಜಿಗಿಂತ ಹೆಚ್ಚಿದ್ದರೆ, ನೀವು COVID-19 ರೋಗಿಗಳಿಗೆ ಪ್ಲಾಸ್ಮಾವನ್ನು ದಾನ ಮಾಡಬಹುದು. ಆದಾಗ್ಯೂ, ಬಾಣಂತಿಯರು ಅಥವಾ ಕೋಮಾರ್ಬಿಡಿಟಿ (ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ರೋಗಗಳಿಂದ ಅಸ್ವಸ್ಥನಾಗಿದ್ದರೆ) ಬಳಲುತ್ತಿದ್ದರೆ ಅಂತಹ ವ್ಯಕ್ತಿಗಳು ಪ್ಲಾಸ್ಮಾವನ್ನು ದಾನ ಮಾಡಲು ಅರ್ಹರಲ್ಲ. ಡಯಾಬಿಟಿಸಿ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ನಿಂದ ಬದುಕುಳಿದವರು ಮತ್ತು ದೀರ್ಘಕಾಲದ ಯಕೃತ್ತು, ಮೂತ್ರಪಿಂಡ ಮತ್ತು ಹೃದಯ ಸಮಸ್ಯೆಗಳಿರುವ ಜನರು ಪ್ಲಾಸ್ಮಾವನ್ನು ದಾನ ಮಾಡಲು ಸಾಧ್ಯವಿಲ್ಲ" ಎಂದು ಹೇಳಿದರು.
"ಇಲ್ಲಿಯವರೆಗೆ, ಜನರು ಪ್ಲಾಸ್ಮಾವನ್ನು ಪಡೆಯುವುದು ಕಷ್ಟಕರವಾಗಿತ್ತು. ಜನರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದರೆ ಮಾತ್ರ ಈ 'ಪ್ಲಾಸ್ಮಾ ಬ್ಯಾಂಕ್' ಸ್ಥಾಪನೆ ಯಶಸ್ವಿಯಾಗುತ್ತದೆ," ಅವರು ಹೇಳಿದರು. "ನೀವು ಅರ್ಹರಾಗಿದ್ದರೆ ಮತ್ತು ಪ್ಲಾಸ್ಮಾ ದಾನ ಮಾಡಲು ಸಿದ್ಧರಿದ್ದರೆ, ನೀವು ನಮ್ಮನ್ನು 1031 ಗೆ ಕರೆ ಮಾಡಬಹುದು'' ಎಂದು ಅವರು ಹೇಳಿದರು.