ಬೆಂಗಳೂರು, ಜು 02 (Daijiworld News/MSP): ಕೆಪಿಸಿಸಿ ಅಧ್ಯಕ್ಷರಾಗಿ 4 ತಿಂಗಳ ಹಿಂದೆ ನೇಮಕಗೊಂಡಿದ್ದ ಡಿ.ಕೆ. ಶಿವಕುಮಾರ್ ಇಂದು ಅಧಿಕೃತವಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿದ ಕಾಂಗ್ರೆಸ್ ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ,ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ದೇಶದ ಹಾಗೂ ದೇಶದ ಜನತೆಯ ಭವಿಷ್ಯ ಉಜ್ವಲವಾಗಬೇಕೆಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರನ್ನು ಹತ್ತಿಕ್ಕಬೇಕು ಮಾತ್ರವಲ್ಲದೆ ಅರೆಸ್ಸೆಸ್ ಬಗ್ಗು ಬಡಿಯುಬೇಕು ಎಂದು ಕರೆ ನೀಡಿದ್ದಾರೆ.
ನರೇಂದ್ರ ಮೋದಿ ಹಾಗೂ ಅಮಿತ್ ಶಾ ಇವರಿಬ್ಬರು ಸೇರಿ ದೇಶವನ್ನು ನಾಶ ಮಾಡಲು ಹೊರಟಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡಲು ಹಾಗೂ ಕೊರೊನಾ ಸೋಂಕು ವ್ಯಾಪಕವಾಗಲು ಇವರಿಬ್ಬರ ನೀತಿಗಳು ಕಾರಣ ಎಂದು ಆರೋಪಿಸಿದರು.
ದೇಶದಲ್ಲಿ ಸಣ್ಣ ಕೈಗಾರಿಕೆಗಳಿಗೆ ಹೊಡೆತ ಹಾಗೂ ನಿರುದ್ಯೋಗ ತಾಂಡವವಾಡಲು ಕೇಂದ್ರ ಸರ್ಕಾರವೇ ಕಾರಣ, ಆದರೆ, ಮೋದಿ ಮತ್ತು ಅಮಿತ್ ಶಾ ಇವರು ತಮ್ಮ ತಪ್ಪುಗಳನ್ನು ಯಾವತ್ತೂ ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದವರ ಸಲಹೆ ಹಾಗೂ ಬುದ್ದಿಮಾತು ಗಣನೆಗೆ ತೆಗೆದುಕೊಳ್ಳುದಿಲ್ಲ ಎಂದು ಕಿಡಿಕಾರಿದ್ದಾರೆ.