ಮುಂಬೈ, ಜು. 03 (DaijiworldNews/MB) : ಬಾಲಿವುಡ್ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ (71) ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದೆ ತೀವ್ರ ಉಸಿರಾಟ ಸಮಸ್ಯೆಯಿಂದ ಇವರಲ್ಲಿ ಕಾಣಿಸಿಕೊಂಡ ಕಾರಣ ಬಾಂದ್ರಾದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶುಕ್ರವಾರ ಬೆಳಗಿನ ಜಾವ ಸುಮಾರು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಅವರ ಕೊರೊನಾ ಪರೀಕ್ಷೆ ನಡೆಸಲಾಗಿದ್ದು ವರದಿ ನೆಗೆಟಿವ್ ಬಂದಿದೆ ಎಂದು ವರದಿ ತಿಳಿಸಿದೆ.
1974ರಲ್ಲಿ ಹಿಂದಿಯ ನಾಮ್ ಸಿನಿಮಾದ ಮೂಲಕ ಸಿನಿಮಾರಂಗದಲ್ಲಿ ನೃತ್ಯ ಸಂಯೋಜಕಿಯಾಗಿ ಪಾದಾರ್ಪಣೆಗೈದ ಅವರು, ಸುಮಾರು 2 ಸಾವಿರಕ್ಕೂ ಅಧಿಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.
ಒಟ್ಟು ಮೂರು ಬಾರಿ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾಗಿರುವ ಇವರು ಬಾಲಿವುಡ್ನ ಖ್ಯಾತ ಹಾಡುಗಳಾದ ಏಕ್ ದೋ ತೀನ್, ಚೋಲಿ ಕೆ ಪೀಚೆ ಕ್ಯಾಹೆ, ಡೋಲಾ ರೆ ಡೋಲಾ, ಹವಾ ಹವಾಯಿ ಸೇರಿದಂತೆ ಅನೇಕ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ.