ಬೆಂಗಳೂರು, ಜು 03(DaijiworldNews/PY): ಬೆಲ್ ಬಾಟಮ್, ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಸಿನಿಮಾಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ಲೋಕೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಲೋಕೇಶ್ ಮೂಲತಃ ನಾಗಮಂಗಲದವರಾಗಿದ್ದು, ಕೆಲಸದ ಕಾರಣದಿಂದ ಬೆಂಗಳೂರಿನಲ್ಲಿದ್ದರು. ಲೋಕೇಶ್ ಅವರು ಕೆಲ ವರ್ಷಗಳ ಹಿಂದೆ ಪೋಷಕರನ್ನು ಕಳೆದುಕೊಂಡಿದ್ದರು. ಹಾಗಾಗಿ ಅವರು ಸಹೋದರನ ಮನೆಯಲ್ಲಿದ್ದರು. ಕೊರೊನಾ ಲಾಕ್ಡೌನ್ ಆದಾಗಿನಿಂದ ಕೆಲಸವಿಲ್ಲದೇ ಅವರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದರು ಎಂದು ತಿಳಿದು ಬಂದಿದೆ. ಈ ಕಾರಣದಿಂದ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಲೋಕೇಶ್ ಅವರು ಬೆಲ್ ಬಾಟಮ್ -2 ಹಾಗೂ ಬನಾರಸ್ ಸಿನಿಮಾಕ್ಕೆ ಕೆಲಸ ಮಾಡಬೇಕಿತ್ತು. ಆದರೆ, ಲಾಕ್ಡೌನ್ ಪರಿಣಾಮದಿಂದ ಸಿನಿಮಾದ ಕೆಲಸಗಳು ನಿಂತಿತ್ತು. ಲೋಕೇಶ್ ಅವರು ಸ್ವಾಭಿಮಾನಿಯಾಗಿದ್ದು, ಯಾರ ಬಳಿಯೂ ಕೈ ಚಾಚುತ್ತಿರಲಿಲ್ಲ. ಕಷ್ಟ ಎಂದವರಿಗೆ ಸಹಾಯ ಮಾಡುತ್ತಿದ್ದರು ಎಂದು ನಿರ್ಮಾಪಕ ಸಂತೋಷ್ ಸಂತಾಪ ಸೂಚಿಸಿದ್ದಾರೆ.