ಕಾನ್ಪುರ, ಜು 03(DaijiworldNews/PY): ರೌಡಿಶೀಟರ್ ವಿಕಾಸ್ ದುಬೆಯನ್ನು ಪತ್ತೆಹಚ್ಚಲು ಪೊಲೀಸರ ತಂಡ ಹೋಗಿದ್ದ ಸಂದರ್ಭದಲ್ಲಿ ಇಬ್ಬರು ಅಪರಿಚಿತ ಕ್ರಿಮಿನಲ್ಗಳನ್ನು ಹತ್ಯೆ ಮಾಡಲಾಗಿದೆ ಎಂದು ಕಾನ್ಪುರ ಪೊಲೀಸ್ ಮಹಾ ನಿರ್ದೇಶಕ ಮೋಹಿತ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
ಕಾನ್ಪುರ ಸಮೀಪದ ಚೌಬೆಪುರ್ನ ಬಿತೂರ್ ಗ್ರಾಮವೊಂದರಲ್ಲಿ ಇಂದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ನಡೆದ ಕ್ರಿಮಿನಲ್ಗಳು ನಡೆಸಿದ ಗುಂಡಿನ ದಾಳಿಯಿಂದ ಡಿವೈಎಸ್ಪಿ ಸೇರಿದಂತೆ 8 ಮಂದಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಕ್ರಿಮಿನಲ್ಗಳನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಶೋಧ ಕಾರ್ಯ ಮುಂದುವರೆದಿದೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಸಂತಾಪ ಸೂಚಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯುಪಿ ಸರ್ಕಾರವು ಹುತಾತ್ಮರಾದ ಪೊಪೀಸರ ಬಲಿದಾನವನ್ನು ಮರೆಯುವುದಿಲ್ಲ ಎಂದಿದ್ದು, ಘಟನೆ ಬಗ್ಗೆ ಡಿಜಿಪಿ ಹೆಚ್ ಸಿ ಅವಸ್ತಿ ಅವರಲ್ಲಿ ವರದಿ ಕೇಳಿದ್ದಾರೆ.
ದಾಳಿಯ ಸಂದರ್ಭ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಸಬ್ಇನ್ಸ್ಪೆಕ್ಟರ್ ಹಾಗೂ ನಾಲ್ವರು ಕಾನ್ಸ್ಸ್ಟೇಬಲ್ಗಳು ಹುತಾತ್ಮರಾಗಿದ್ದು ಇತರ 6 ಮಂದಿ ಪೊಲೀಸ್ ಸಿಬ್ಬಂದಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.