ಲೇಹ್, ಜು. 03 (DaijiworldNews/MB) : ನಿಮ್ಮ ತಾಕತ್ತನ್ನು ಭಾರತ ಮಾತೆಯ ವಿರೋಧಿಗಳು ನೋಡಿದ್ದಾರೆ ಎಂದು ಲಡಾಖ್ನಲ್ಲಿ ಯೋಧರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗಲ್ವಾನ್ ಕಣಿವೆ ಪ್ರದೇಶದಲ್ಲಿ ಚೀನಾ ಹಾಗೂ ಭಾರತೀಯ ಸೇನೆ ನಡುವೆ ಘರ್ಷಣೆ ನಡೆದು ಭಾರತೀಯ ಯೋಧರು ಹುತಾತ್ಮರಾದ ಬಳಿಕ ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಲಡಾಖ್ಗೆ ಭೇಟಿ ನೀಡಿದ್ದು ಯೋಧರನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ಧೈರ್ಯ ನೀವು ಕರ್ತವ್ಯ ನಿರ್ವಹಿಸುತ್ತಿರುವ ಪ್ರದೇಶಕ್ಕಿಂತಲೂ ಉತ್ತುಂಗದಲ್ಲಿದೆ. ನೀವು ಹಾಗೂ ನಿಮ್ಮ ಸಹಚರರು ತೋರಿದ ಧೈರ್ಯ ಇಡೀ ಜಗತ್ತಿಗೆ ಸಂದೇಶ ಸಾರಿದೆ. ನಿಮ್ಮ ಧೈರ್ಯದ ಬಗ್ಗೆ ದೇಶದಲ್ಲೆಡೆ ಮಾತನಾಡುತ್ತಿದ್ದು ಎಲ್ಲರ ಮನೆಯಲ್ಲಿ ನಿಮ್ಮ ಸಾಹಸದ ಕಥೆ ಇಂದಿಗೂ ಪ್ರತಿಧ್ವನಿಸುತ್ತಿದೆ. ಹುತಾತ್ಮ ಯೋಧರಿಗೆ ಮತ್ತೊಮ್ಮೆ ಧನ್ಯವಾದ ಎಂದು ಹೇಳಿದರು.
ಕೊಳಲನ್ನು ಊದುವ ಕೃಷ್ಣನನ್ನು ಆರಾಧಿಸುವ ನಾವು ಸುದರ್ಶನ ಚಕ್ರ ಹಿಡಿದ ಕೃಷ್ಣನನ್ನೂ ಆರಾಧಿಸುತ್ತೇವೆ ಎಂದು ಚೀನಾಕ್ಕೆ ಸ್ಮೇಹ ಹಾಗೂ ಯುದ್ಧಕ್ಕೆ ಎರಡಕ್ಕೂ ಭಾರತ ಸಜ್ಜಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಗಡಿ ಪ್ರದೇಶಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಮಾಡಲಾಗುವ ವೆಚ್ಚವನ್ನು ಮೂರುಪಟ್ಟು ಹೆಚ್ಚಿಸಿದ್ದೇವೆ ಎಂದು ತಿಳಿಸಿದ್ದಾರೆ.
ಶಾಂತಿ ಸ್ಥಾಪನೆಗೆ ಧೈರ್ಯ ಮುಖ್ಯ. ಅಗತ್ಯವಿದ್ದಾಗ ಶಾಂತಿ ಸ್ಥಾಪನೆಯಲ್ಲಿ ಜಯ ಸಾಧಿಸಿದ್ದನ್ನು ವಿಶ್ವವೇ ನೋಡಿದೆ. ಮಾನವೀಯತೆಯ ಸುಧಾರಣೆಗಾಗಿ ನಾವು ಕೆಲಸ ಮಾಡಿದ್ದೇವೆ. ಈಗ ವಿಸ್ತರಣೆಯ ಕಾಲ ಮುಗಿದಿದೆ. ಇದು ಅಭಿವೃದ್ಧಿಯ ಕಾಲ. ಭೂಪ್ರದೇಶ ವಿಸ್ತರಣೆಗೆ ಮುಂದಾದವರು ಸೋಲು ಅನುಭವಿಸಿ ಓಡಿ ಹೋಗಿರುವುದಕ್ಕೆ ವಿಶ್ವವೇ ಸಾಕ್ಷಿಯಾಗಿದೆ ಎಂದರು.
ನಾನೀಗ ಮಹಿಳಾ ಯೋಧರನ್ನೂ ನೋಡುತ್ತಿದ್ದೇನೆ. ಇದು ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.