ಬೆಂಗಳೂರು, ಜು 03(DaijiworldNews/PY): ಸಿಎಂ ಫಂಡ್ಗೆ ಬಂದಿರುವ 290 ಕೋಟಿಯನ್ನು ಯಾವುದಕ್ಕೆ ಖರ್ಚು ಮಾಡಿದ್ದೀರಾ ಎಂದು ಸಿಎಂ ಬಿಎಸ್ವೈ ಅವರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಹಾಗೂ ತಪ್ಪು ತೀರ್ಮಾನಗಳಿಂದ ಸೋಂಕು ಹೆಚ್ಚಾಗಿದ್ದು, ನಾವು ಜಗತ್ತಿನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದೇವೆ ಎಂದು ಕಿಡಿಕಾರಿದ್ದಾರೆ.
ಸೋಂಕು ನಿರ್ವಹಣೆಯ ಜವಾಬ್ದಾರಿಯನ್ನು ಶ್ರೀರಾಮುಲು ಹಾಗೂ ಸುಧಾಕರ್ಗೆ ನೀಡಿದ್ದರು. ಆದರೆ ಈಗ ಅಶೋಕ್ಗೆ ನೀಡಿದ್ದಾರೆ. ಸುಧಾಕರ್ ಅವರು ಡಾಕ್ಟರ್. ಹಾಗಾಗಿ, ಅವರಿಗೆ ಮೆಡಿಕಲ್ ಬೇಸಿಕ್ ತಿಳಿದಿರುತ್ತದೆ. ಸಚಿವರುಗಳ ನಡುವೆ ಒಗ್ಗಟ್ಟಿಲ್ಲ ಎಂದರು.
ಜನರು ಶವಸಂಸ್ಕಾರ ಮಾಡಲು ಭಯಪಡುತ್ತಿದ್ದಾರೆ. ಅಲ್ಲದೇ, ಸುಟ್ಟ ನಂತರ ಬೂದಿಯನ್ನು ತೆಗೆದುಕೊಳ್ಳುವುದಕ್ಕೆ ಭಯಪಡುತ್ತಾರೆ. ಮುಂಜಾಗ್ರತಾ ಕ್ರಮಕೈಗೊಂಡು ಶವ ಮುಟ್ಟಿದರೆ ಏನೂ ಆಗುವುದಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಶವವನ್ನು ತಿಪ್ಪೆಗೆ ಎಸೆದ ರೀತಿಯಲ್ಲಿ ಎಸೆದಿದ್ಧಾರೆ. ಕೊರೊನಾದಿಂದ ಇಷ್ಟು ಸಾವಾದರೂ ಶವಸಂಸ್ಕಾರ ಹೇಗೆ ಮಾಡುವುದು ಎನ್ನುವುದನ್ನು ತಿಳಿದುಕೊಳ್ಳಲು ಆಗುವುದಿಲ್ಲವೇ ಎಂದು ಕೇಳಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಎಷ್ಟು ಖರ್ಚು ಮಾಡಿದ್ದೇವೆ. ಎನ್ನುವುದರ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಯಾರೊಬ್ಬರಿಗೂ ಇವತ್ತಿನವರೆಗೆ ಪರಿಹಾರ ತಲುಪಿಲ್ಲ ಎಂದರು.