ಪಟಣ, ಜು 04(DaijiworldNews/PY): ಸಿಡಿಲಿನ ಹೊಡೆತಕ್ಕೆ ಬಿಹಾರದಲ್ಲಿ ಶುಕ್ರವಾರ 8 ಮಂದಿ ಸಾವನ್ನಪ್ಪಿದ್ದು, ಜೂನ್ 25ರಂದು ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸಿಡಿಲಿನ ಅಬ್ಬರಕ್ಕೆ ಸುಮಾರು 83 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಘಟನೆ ಸಮಸ್ತಿಪುರ ಜಿಲ್ಲೆಯಲ್ಲಿ ಮೂವರು, ಲಖಿಸರೈನಲ್ಲಿ ಇಬ್ಬರು, ಗಯಾ, ಬಂಕಾ ಮತ್ತು ಜಮುಯಿ ಜಿಲ್ಲೆಗಳಲ್ಲಿ ಓರ್ವ ಮೃತಪಟ್ಟಿದ್ದಾರೆ ಎಂದು ವಿಪತ್ತು ನಿರ್ವಹಣಾ ವಿಭಾಗದ ಮೂಲಗಳು ತಿಳಿಸಿವೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಗುರುವಾರ ಕೂಡಾ ಸಿಡಿಲಿನ ಅಬ್ಬರಕ್ಕೆ 26 ಮಂದಿ ಅಸುನೀಗಿದ್ದು, ಶುಕ್ರವಾರವೂ ಅಬ್ಬರಿಸಿದ ಸಿಡಿಲಿಗೆ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಅಸ್ಸಾಂನ ಕೆಲವು ಜಿಲ್ಲೆಗಳಲ್ಲಿ ಸಂಭವಿಸಿದ ಪ್ರವಾಹಕ್ಕೆ ಶುಕ್ರವಾರ ಓರ್ವ ವ್ಯಕ್ತಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಪ್ರವಾಹದಿಂದಾಗಿ ಅಸ್ಸಾಂನ 20 ಜಿಲ್ಲೆಗಳಲ್ಲಿ ಸುಮಾರು 13.3 ಲಕ್ಷ ಮಂದಿ ಬಾಧಿತರಾಗಿದ್ದಾರೆ.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಸಿಡಿಲಾಘಾತಕ್ಕೆ ಮೃತಪಟ್ಟ ಕುಟುಂಬಕ್ಕೆ ತಲಾ 4 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ.