ಬೆಂಗಳೂರು, ಜು 04 (DaijiworldNews/PY): ಕೊರೊನಾಕ್ಕೆ ಚಿಕಿತ್ಸೆ ನೀಡಲು ಎರಡು ಆಯುರ್ವೇದ ಔಷಧಿಗಳ ಕ್ಲಿನಿಕಲ್ ಪ್ರಯೋಗಗಳು ಬೆಂಗಳೂರಿನಲ್ಲಿ ಭರವಸೆಯ ಫಲಿತಾಂಶವನ್ನು ನೀಡಿವೆ ಎಂದು ಆಯುರ್ವೇದ ವೈದ್ಯ ಮತ್ತು ಸಂಶೋಧಕರು ಹೇಳಿದ್ದಾರೆ.
2-4 ದಿನಗಳಲ್ಲಿ ರೋಗಲಕ್ಷಣಗಳು ಕಡಿಮೆಯಾಗುವುದರೊಂದಿಗೆ ಭೂಮ್ಯಾ ಮತ್ತು ಸಾಥ್ಮಿಯಾ ರೋಗಿಗಳು ಬೇಗನೆ ಚೇತರಿಸಿಕೊಂಡರು. 10 ದಿನಗಳಲ್ಲಿ ಅವರ ವರದಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.
ಕ್ಲಿನಿಕಲ್ ಪ್ರಯೋಗಗಳನ್ನು ನಡೆಸಲು ಬೆಂಗಳೂರಿನ ಪ್ರಶಾಂತಿ ಆಯುರ್ವೇದ ಕೇಂದ್ರದ ವೈದ್ಯಕೀಯ ನಿರ್ದೇಶಕ, ಮುಖ್ಯ ವೈದ್ಯ ಡಾ.ಗಿರಿಧರ ಕಜೆ ಅವರು ಐಸಿಎಂಆರ್ ನಿಂದ ಅನುಮೋದನೆ ಪಡೆದಿದ್ದರು ಮತ್ತು ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಸಹಯೋಗದೊಂದಿಗೆ ಈ ಅಧ್ಯಯನವನ್ನು ನಡೆಸಲಾಯಿತು.
ರಾಜ್ಯದಲ್ಲಿ ಕೇವಲ 400 ಪ್ರಕರಣಗಳು ಇದ್ದಾಗ ಡಾ. ಕಜೆ ಅವರು ಎಪ್ರಿಲ್ನಲ್ಲಿ ಐಸಿಎಂಆರ್ ಅನುಮೋದನೆ ಕೋರಿದ್ದರು. ಜೂನ್ 7 ಮತ್ತು ಜೂನ್ 25 ರ ನಡುವೆ ನಡೆಸಿದ ಅಧ್ಯಯನಕ್ಕಾಗಿ 10 ರೋಗಿಗಳು 23 ರಿಂದ 65 ವರ್ಷ ವಯಸ್ಸಿನವರನ್ನು ಆಯ್ಕೆ ಮಾಡಲಾಗಿದ್ದು, ಎಲ್ಲಾ ರೋಗಿಗಳು ರೋಗಲಕ್ಷಣ ಮತ್ತು ಐದು ಮಂದಿ ಕೊಮೊರ್ಬಿಡಿಟಿಗಳನ್ನು ಹೊಂದಿದ್ದರು. ಪ್ರೋಟೋಕಾಲ್ ಪ್ರಕಾರ ಅಲೋಪತಿ ಔಷಧಿಗಳ ಜೊತೆಗೆ ಅವರಿಗೆ ಔಷಧಿಗಳನ್ನು ನೀಡಲಾಯಿತು.
ಎರಡು ಔಷಧಿಗಳು ಪ್ರಸ್ತುತ ಮಾರಾಟಕ್ಕೆ ಇಲ್ಲ. ನಾನು ಕಳೆದ 20 ವರ್ಷಗಳಿಂದ ಈ ಔಷಧಿಗಳನ್ನು ಬಳಸಿದ್ದೇನೆ. ಅವು ಆಂಟಿ-ವೈರಲ್, ಇಮ್ಯುನೊಮಾಡ್ಯುಲೇಟರಿ ಗುಣಲಕ್ಷಣಗಳನ್ನು ಹೊಂದಿವೆ. ನಾನು ಅವುಗಳನ್ನು ಹಣಕ್ಕಾಗಿ ಮಾರಾಟ ಮಾಡಲು ಬಯಸುವುದಿಲ್ಲ. ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಔಷಧ ಪರವಾನಗಿಯನ್ನು ಸರ್ಕಾರಕ್ಕೆ ಒಪ್ಪಿಸಲು ನಾನು ಸಿದ್ಧನಿದ್ದೇನೆ ಎಂದು ಡಾ. ಕಜೆ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.