ಬೆಂಗಳೂರು, ಜು 04 (DaijiworldNews/PY): ಜು 4ರಿಂದ 7ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಈ ಭಾಗದಲ್ಲಿ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿದೆ. ಒಂದು ವಾರದಿಂದ ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಶನಿವಾರವೂ ಕೂಡಾ ಅತೀ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ. ಅಲ್ಲದೇ ಕರಾವಳಿ ಭಾಗದಲ್ಲಿ ವೇಗವಾಗಿ ಗಾಳಿ ಬೀಸುತ್ತಿರುವ ಕಾರಣ ಮೀನುಗಾರರು ಮುಂಜಾಗ್ರತಾ ಕ್ರಮವಾಗಿ ಸಮುದ್ರಕ್ಕೆ ಇಳಿಯುವಂತಿಲ್ಲ ಎಂದಿದ್ದಾರೆ.
ಇನ್ನು ನಾಲ್ಕು ದಿನಗಳವರೆಗೆ ಉತ್ತರ ಒಳನಾಡಿನ ಯಾದಗಿರಿ, ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ಕಲಬುರ್ಗಿ, ರಾಯಚೂರು ಹಾಗೂ ದಕ್ಷಿ ಒಳನಾಡಿನ ಕೊಡಗು, ಹಾಸನ ಸೇರಿದಂತೆ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಸಾಧಾರಣವಾಗಿ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಶುಕ್ರವಾರದಂದು, ಉಪ್ಪಿನಂಗಡಿ, ಗೋಕರ್ಣ, ಕಾರವಾರ, ಕುಮಟಾ 10, ಸುಬ್ರಹ್ಮಣ್ಯ, ಕದ್ರಾ 9, ಪುತ್ತೂರು 8, ಸುಳ್ಯ, ಧರ್ಮಸ್ಥಳ, ಭಾಗಮಂಡಲ 7, ಕೋಟ 6, ಮಂಗಳೂರು, ಮೂಡುಬಿದರೆ 16, ಅಂಕೋಲಾ 13, ಕಾರ್ಕಳ, ಚಿಂಚೋಳಿ 12, ಭಟ್ಕಳ 11, ಕುಂದಾಪುರ, ಹೊಸನಗರ, ಶೃಂಗೇರಿ, ತೀರ್ಥಹಳ್ಳಿ 5, ಸಕಲೇಶಪುರ 4, ಗೌರಿಬಿದನೂರು, ಬೆಳಗಾವಿ, ಕುಶಾಲನಗರದಲ್ಲಿ 2, ಮಡಿಕೇರಿ, ಮೊಳಕಾಲ್ಮೂರು, ಸೊರಬ, ಚಿಂತಾಮಣಿ, ತರೀಕೆರೆ, ಸೋಮವಾರಪೇಟೆ, ಹೊಸಪೇಟೆ 3 ಸೆ.ಮೀ ಮಳೆಯಾಗಿದ್ದು, ಹೊನ್ನಾವರದಲ್ಲಿ 17 ಸೆಂ.ಮೀ ಗರಿಷ್ಠ ಮಳೆಯಾಗಿದೆ.