ನವದೆಹಲಿ, ಜು 04 (Daijiworld News/MSP): ಕೋವಿಡ್-19 ವಿರುದ್ಧದ ದೇಶದ ಮೊದಲ ಲಸಿಕೆ 'ಕೊವಾಕ್ಸಿನ್ 'ನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗ ಕಾರ್ಯಕ್ಕೆ ಹೈದರಾಬಾದ್ ಮೂಲದ ಲಸಿಕೆ ತಯಾರಿಕ ಕಂಪನಿ ಭಾರತ್ ಬಯೋಟೆಕ್ ಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಡಿಸಿಜಿಐ) ಅನುಮೋದನೆ ನೀಡಿದ ಬೆನ್ನಲ್ಲೇ ಇದರ ಮೊತ್ತ ಮೊದಲ ಮಾನವ ಪ್ರಯೋಗ ಕುಂದಾ ನಗರಿ ಬೆಳಗಾವಿಯ ಜೀವನ್ ರೇಖಾ ಆಸ್ಪತ್ರೆ ಸಹಿತ ದೇಶದ 12 ಸಂಸ್ಥೆಗಳಲ್ಲಿ ಶೀಘ್ರವೇ ಆರಂಭವಾಗಲಿದೆ.
ಲಸಿಕೆಯನ್ನು ಶೀಘ್ರವೆ ಬಳಕೆಗೆ ತರುವ ಉದ್ದೇಶದಿಂದ ಎಲ್ಲ ಪರೀಕ್ಷೆ ಗಳನ್ನು ತ್ವರಿತಗತಿಯಲ್ಲಿ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನ ಮಂಡಳಿ (ಐಸಿಎಂಆರ್) ತಿಳಿಸಿದೆ. ಒಂದು ವೇಳೆ ಪ್ರಯೋಗ ಯಶಸ್ವಿಯಾದರೆ ಆ.15ರ ಒಳಗಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ.
ಪೂರ್ವಭಾವಿ ಅಧ್ಯಯನ (ಪ್ರೀ ಕ್ಲಿನಿಕಲ್ ಸ್ಟಡೀಸ್) ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ಪ್ರತಿಕ್ರಿಯೆಯ ಫಲಿತಾಂಶಗಳನ್ನು ಕಂಪನಿ ಸಲ್ಲಿಸಿದ ನಂತರ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐನಿಂದ ಅನುಮತಿ ಸಿಕ್ಕಿದೆ. ಈ ಹಿನ್ನಲೆಯಲ್ಲಿ ದೇಶದ 12 ಆಸ್ಪತ್ರೆಗಳಲ್ಲಿ ಇದರ ಪ್ರಯೋಗ ನಡೆಯಲಿದೆ.
"ಸುಮಾರು ೧೦೦ರಿಂದ ೨೦೦ ಜನರ ಮೇಲೆ ಮಾಡುವ ಪ್ರಯೋಗದ ಪರಿಣಾಮ ಗುರುತಿಸಿದ ನಂತರವಷ್ಟೇ ಈ ಔಷಧ ವನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗುತ್ತದೆ. ಮುಂದಿನ ವಾರದಿಂದ ಇದರ ಪ್ರಯೋಗ ನಡೆಯಲಿದೆ "ಎಂದು ಬೆಳಗಾವಿಯಯ ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ| ಅಮಿತ್ ಭಾತೆ ತಿಳಿಸಿದ್ದಾರೆ.