ನವದೆಹಲಿ, ಜು. 04 (DaijiworldNews/MB) : ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಯ ಕಾರ್ಯಕರ್ತರು ಕೈಗೊಂಡ ಚಟುವಟಿಕೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಸಂಜೆ 4 ಗಂಟೆಗೆ 'ಸೇವಾ ಹಿ ಸಂಘಟನ್' ಹೆಸರಿನಲ್ಲಿ ಚರ್ಚಿಸಲಿದ್ದಾರೆ.
ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಬಿಜೆಪಿ ಕಾರ್ಯಕರ್ತರಿಗೆ ದೇಶದ ಸೇವೆ ಮೊದಲು. ಈ ಸವಾಲಿನ ಕಾಲದಲ್ಲಿ, ನಮ್ಮ ಕಾರ್ಯಕರ್ತರು ಭಾರತದಾದ್ಯಂತ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ, ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಸಂಜೆ 4: 30 ಕ್ಕೆ 'ಸೇವಾ ಹಿ ಸಂಘಟನ್' ಸಂವಾದದ ಸಂದರ್ಭದಲ್ಲಿ ಈ ಬಗ್ಗೆ ಮತ್ತು ಮುಂದಿನ ದಾರಿ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣಗ್ ಸಿಂಗ್, ಕೊರೊನಾ ವೈರಸ್ ಲಾಕ್ಡೌನ್ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮಾಡಿರುವ ಕಾರ್ಯಗಳ ಬಗ್ಗೆ ಬಿಜೆಪಿಯ ರಾಜ್ಯ ಘಟಕವು ಪ್ರಧಾನಿ ಮೋದಿಯವರಿಗೆ ವಿವರವಾಗಿ ತಿಳಿಸಲಿದ್ದಾರೆ ಎಂದು ಹೇಳಿದ್ದಾರೆ.
ಜುಲೈ ೫ ರಂದು ಬಿಜೆಪಿ ಕಾರ್ಯಕರ್ತರು ಕೈಗೊಂಡ ಕೆಲಸಗಳ ಬಗ್ಗೆ ಬಿಜೆಪಿ ರಾಜ್ಯ ಘಟಕವು ಸಂವಿವರವಾಗಿ ತಿಳಿಸಲಿದೆ. ಇದು ನಮೋ ಆಪ್ ಹಾಗೂ ಇತರ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲಾ ಹಿರಿಯ ನಾಯಕರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.