ಬೆಂಗಳೂರು, ಜು. 04 (DaijiworldNews/MB) : ಭಾರತದ ಮಾರ್ಸ್ ಆರ್ಬಿಟರ್ ಮಿಷನ್ನ (ಎಂಒಎಂ) ಬಣ್ಣದ ಕ್ಯಾಮೆರಾವೊಂದು ಮಂಗಳ ಗ್ರಹದ ಅತಿ ದೊಡ್ಡ ನಿಗೂಢ ಚಂದ್ರನೆಂದೇ ಕರೆಯಲಾಗುವ ಫೋಬೊಸ್ನ ಚಿತ್ರವನ್ನು ಸೆರೆಹಿಡಿದಿದ್ದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಇದನ್ನು ಬಿಡುಗಡೆ ಮಾಡಿದೆ.
ಮಂಗಳ ಗ್ರಹದ ಎರಡು ಉಪಗ್ರಹಗಳಲ್ಲಿ ಫೋಬೊಸ್ ಒಂದಾಗಿದ್ದು ಜುಲೈ 1 ರಂದು ಮಂಗಳ ಗ್ರಹದಿಂದ 7,200 ಕಿ.ಮೀ. ಮತ್ತು ಫೋಬೋಸ್ನಿಂದ 4,200 ಕಿ.ಮೀ ದೂರದಲ್ಲಿದ್ದಾಗ ಈ ಚಿತ್ರವನ್ನು ತೆಗೆಯಲಾಗಿದೆ ಎಂದು ವರದಿ ತಿಳಿಸಿದೆ.
ಚಿತ್ರದ ಪ್ರಾದೇಶಿಕ ರೆಸಲ್ಯೂಶನ್ 210 ಮೀ ಇದ್ದು, 6 ಎಂಸಿಸಿ ಫ್ರೇಮ್ಗಳಿಂದ ಉತ್ಪತ್ತಿಯಾದ ಸಂಯೋಜಿತ ಚಿತ್ರವಾಗಿದೆ. ಇದರ ಬಣ್ಣವನ್ನು ಸರಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ. ಈ ಚಿತ್ರದಲ್ಲಿ ಫೋಬೊಸ್ನ ಅತಿದೊಡ್ಡ ಕುಳಿಯಾದ ಸ್ಟಿಕ್ನಿ ಹಾಗೂ ಇತರ ಕುಳಿಗಳಾದ ಶ್ಕ್ಲೋವಸ್ಕಿ, ರೋಚೆ ಮತ್ತು ಗ್ರಿಲ್ಡ್ರಿಗ್ಗಳನ್ನು ಕಾಣಬಹುದಾಗಿದೆ.
2014 ರ ಸೆಪ್ಟೆಂಬರ್ 24 ರಂದು ಮಾರ್ಸ್ ಆರ್ಬಿಟರ್ ಮಿಷನ್ ಬಾಹ್ಯಾಕಾಶ ನೌಕೆಯನ್ನು ಕೆಂಪು ಗ್ರಹದ ಸುತ್ತಲೂ ಕಕ್ಷೆಯಲ್ಲಿ ಯಶಸ್ವಿಯಾಗಿ ಇರಿಸಿದೆ.