ಕೋಹಿಮಾ, ಜು. 04 (DaijiworldNews/MB) : ಪ್ರಾಣಿಗಳ ಹಿಂಸೆಗೆ ತೀವ್ರವಾದ ಖಂಡನೆಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ನಾಗಾಲ್ಯಾಂಡ್ ಸಚಿವ ಸಂಪುಟವು ನಾಯಿಗಳ ಮಾಂಸ ಮಾರಾಟ, ಮಾರಾಟಕ್ಕಾಗಿ ನಾಯಿಗಳ ಆಮದು ಹಾಗೂ ನಾಯಿ ಮಾಂಸ ಬಳಕೆಗೆ ನಿಷೇಧ ಹೇರಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಸಂಸದೀಯ ವ್ಯವಹಾರಗಳ ಸಚಿವ ನೈಬಾ ಕ್ರೋನು, ಹೊರ ರಾಜ್ಯದಿಂದ ನಾಯಿಗಳನ್ನು ಆಮದು ಮಾಡಿಕೊಳ್ಳುವುದು ಅಪಾಯಕಾರಿಯಾಗಿದ್ದು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ–1960 ಪ್ರಕಾರ ರಾಜ್ಯ ಸಚಿವ ಸಂಪುಟದಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ರಾಜ್ಯದಲ್ಲಿ ಹಂದಿ ಜ್ವರ ಹರಡಿರುವ ಕಾರಣದಿಂದ ಈಗಾಗಲೇ ರಾಜ್ಯವು ಹಂದಿಗಳ ಆಮದನ್ನು ನಿರ್ಬಂಧಿಸಿದೆ. ಈಗ ಈ ಕೂಡಲೇ ಜಾರಿಗೆ ಬರುವಂತೆ ಹಂದಿಗಳ ಆಮದು ಮತ್ತು ಮಾರಾಟವನ್ನೂ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ನಾಗಾಲ್ಯಾಂಡ್ ಸರ್ಕಾರದ ಈ ನಿರ್ಧಾರಕ್ಕೆ ಪ್ರಾಣಿ ದಯಾ ಸಂಘಟನೆಗಳು ಶ್ಲಾಘನೆ ವ್ಯಕ್ತಪಡಿಸಿದೆ.