ಬೆಂಗಳೂರು, ಜು. 05 (DaijiworldNews/MB) : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಭಾನುವಾರ ರಾಜ್ಯದ್ಯಾಂತ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು ಶನಿವಾರ ರಾತ್ರಿ ೮ ಗಂಟೆಯಿಂದಲ್ಲೇ ಲಾಕ್ಡೌನ್ ಆರಂಭವಾಗಿದೆ. ಸತತ ೩೩ ಗಂಟೆಗಳ ಬಳಿಕ ಅಂದರೆ ಇನ್ನು ಸೋಮವಾರ ಬೆಳಿಗ್ಗೆ ಗಂಟೆಯ ಬಳಿಕ ವ್ಯಾಪಾರ ವಹಿವಾಟುಗಳು ಆರಂಭವಾಗಲಿದೆ. ಇನ್ನು ಒಂದು ತಿಂಗಳಿನಲ್ಲಿ ಎಲ್ಲಾ ಭಾನುವಾರದಂದೂ ಸಂಪೂರ್ಣ ಲಾಕ್ಡೌನ್ ಆಗಲಿದೆ.
ಕೆಲವು ಜಿಲ್ಲೆಯಲ್ಲಿ ಹಾಲು, ದಿನ ಪತ್ರಿಕೆ ಹಾಗೂ ಆಸ್ಪತ್ರೆ ಮೆಡಿಕಲ್ ಸೌಲಭ್ಯಗಳಿಗೆ ಮಾತ್ರ ಅವಕಾಶ ನೀಡಿದ್ದರೆ ಇನ್ನು ಕೆಲವು ಜಿಲ್ಲೆಗಳಲ್ಲಿ ತರಕಾರಿ, ಹಣ್ಣು, ಔಷಧ, ಮಾಂಸದ ಅಂಗಡಿ ಸೇರಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಇರುತ್ತದೆ. ಹಾಗೆಯೇ ರಾಜ್ಯದಾದ್ಯಂತ ಮದ್ಯದಂಗಡಿ, ಟ್ಯಾಕ್ಸಿ, ಆಟೋ, ಬಿಎಂಟಿಸಿ, ಕೆಎಸ್ಆರ್'ಟಿಸಿ ಬಸ್, ದೇವಾಲಯಗಳು ಸೇರಿ ಅನಗತ್ಯ ಸೇವೆಗಳನ್ನು ನಿಷೇಧಿಸಲಾಗಿದೆ.
ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗೀ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದ್ದು ಅನಗತ್ಯವಾಗಿ ತಿರುಗಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ ಸೇರಿದಂತೆ ನೆರೆ ರಾಜ್ಯಗಳ ಗಡಿಯನ್ನು ಕೂಡಾ ಬಂದ್ ಮಾಡಲಾಗಿದೆ. ಹಾಗೆಯೇ ಜಿಲ್ಲಾ ಕೇಂದ್ರದ ಪ್ರಮುಖ ರಸ್ತೆಗಳನ್ನು ಬಂದ್ ಮಾಡಲಾಗಿದೆ.