ಲಕ್ನೋ, ಜು. 05 (DaijiworldNews/MB) : 2019 ರಲ್ಲಿ 22 ಕೋಟಿ ಸಸಿಗಳನ್ನು ನೆಡುವ ಮೂಲಕ ವಿಶ್ವ ದಾಖಲೆ ಬರೆದಿದ್ದ ಉತ್ತರಪ್ರದೇಶದ ಯೋಗಿ ಸರ್ಕಾರ ಇದೀಗ ಭಾನುವಾರ 25 ಕೋಟಿ ಸಸಿಗಳನ್ನು ನೆಡುವುದರ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಬೆಳಿಗ್ಗೆ ಕುಕ್ರೈಲ್ ಮೀಸಲು ಅರಣ್ಯದಲ್ಲಿ ಸಸಿ ನೆಡುವ ಮೂಲಕ ಈ ಕಾರ್ಯಕ್ಕೆ ಚಾಲನೆ ನೀಡಿದ್ದು ಹಾಗೆಯೇ ಸಸಿ ನೆಡುವ ಸಂದರ್ಭದಲ್ಲಿ ಎಲ್ಲರೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಿ ಎಂದು ಸರ್ಕಾರಿ ಇಲಾಖೆಗಳಿಗೆ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆ 10 ಕೋಟಿ ಸಸಿಗಳನ್ನು ನೆಡಲಿದೆ ಮತ್ತು 26 ಸರ್ಕಾರಿ ಇಲಾಖೆಗಳು ಉಳಿದ 15 ಕೋಟಿ ಸಸಿಗಳನ್ನು ನೆಡಲಿವೆ.
ಎಲ್ಲಾ ತೋಟಗಳಲ್ಲಿ "ದೋ ಗಜ್ ಕಿ ದೂರಿ ಮಾಸ್ಕ್ ಜರೂರಿ" (ಎರಡು ಗಜ ಅಂತರ ಹಾಗೂ ಮಾಸ್ಕ್ ಕಡ್ಡಾಯ) ಮತ್ತು "ಕೊರೊನಾ ಹರೆಗಾ, ದೇಶ್ ಜೀತೆಗಾ" (ಕೊರೊನಾ ಸೋಲುತ್ತದೆ, ದೇಶ ಗೆಲ್ಲುತ್ತದೆ) ಮೊದಲಾದ ಘೋಷಣೆಗಳನ್ನು ಹಾಕಲಾಗಿದೆ.
ಲಕ್ನೋದ ಎರಡು ಮೂರು ತಾಣಗಳಲ್ಲಿ 150 ಕ್ಕೂ ಹೆಚ್ಚು ಜಾತಿಯ ಸಸಿಗಳನ್ನು ನೆಡುವ ಮೂಲಕ ರಾಜ್ಯವು ಈ ಬಾರಿ ಮತ್ತೊಂದು ದಾಖಲೆಯ ಮೇಲೆ ಕಣ್ಣಿಟ್ಟಿದೆ. ಲಕ್ಲೋದಲ್ಲಿಯೇ 26 ಲಕ್ಷಕ್ಕೂ ಹೆಚ್ಚು ಮರಗಳನ್ನು ನೆಡಲಾಗುತ್ತಿದೆ.
ಪ್ರತಿ ಗಂಟೆ ಅಥವಾದ ಎರಡು ಗಂಟೆಗೆ ಒಮ್ಮೆ ತೋಟದಲ್ಲಿ ನೆಟ್ಟಿರುವ ಸಸಿಗಳ ಲೆಕ್ಕಾಚಾರ ಸಂಗ್ರಹಕ್ಕಾಗಿ ಅರಣ್ಯ ಇಲಾಖೆಯ ಪ್ರಧಾನ ಕಚೇರಿಯಲ್ಲಿ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲಾಧಿಕಾರಿಯ ನೇತೃತ್ವದ ಜಿಲ್ಲಾ ಮಟ್ಟದ ಸಮಿತಿಗಳು ಸಸಿ ನೆಡುವ ಕಾರ್ಯಕ್ರಮದ ಚಾಲನೆಯ ಮೇಲ್ವಿಚಾರಣೆ ನಡೆಸುತ್ತಿದ್ದು ರಾಜ್ಯದ 8.7 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಸಸಿಗಳನ್ನು ನೆಡಲಾಗುತ್ತಿದೆ.
ಹಾಗೆಯೇ ಈ ಸಸಿ ನೆಡುವ ಕಾರ್ಯ ಚಾಲನೆಯ ಭಾಗವಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಫಲಾನುಭವಿಗಳಿಗೆ ತಲಾ ಐದು ಸಸಿಗಳನ್ನು ನೀಡಲಾಗಿದೆ.
ಇನ್ನು ಗಂಗಾ, ಯಮುನಾ, ಗೋಮತಿ, ರಾಪ್ತಿ, ಘಘ್ರಾ, ಸರಯು, ಶಾರದಾ, ತಾಮ್ಸಾ, ವರುಣ ಮತ್ತು ಬೆಟ್ವಾ ನದಿ ತೀರದಲ್ಲಿ 2.2 ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗುತ್ತಿದೆ. ಗಂಗಾ ನದಿ ಹರಿಯುವ ಎಲ್ಲಾ 27 ಜಿಲ್ಲೆಗಳ ನದಿ ತೀರದಲ್ಲಿ 67 ಲಕ್ಷ ಸಸಿಗಳನ್ನು ನೆಡಲಾಗುತ್ತಿದೆ.