ನಾಗ್ಪುರ, ಜು 05 (DaijiworldNews/PY): ಭಾರತ ಸರ್ಕಾರವು ಅಭಿವೃದ್ಧಿ ಪರ ಮತ್ತು ಕೈಗಾರಿಕಾ ಪರವಾಗಿದೆ. ಉದ್ಯೋಗ ಸೃಷ್ಠಿಸಿ ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆತ್ಮನಿರ್ಭರ ಭಾರತ ವೆಬ್ ಸಂವಾದದಲ್ಲಿ ಮಾತನಾಡಿದ ಅವರು, ಭಾರತಕ್ಕೆ ಒಂದು ದೊಡ್ಡ ಮಾರುಕಟ್ಟೆ, ನುರಿತ ಮಾನವಶಕ್ತಿ, ಕಚ್ಚಾ ವಸ್ತುಗಳ ಲಭ್ಯತೆ ಇದೆ. ಸರ್ಕಾರವು ಅಭಿವೃದ್ಧಿಯ ಪರ ಹಾಗೂ ಕೈಗಾರಿಕಾ ಪರವಾಗಿದೆ ಎಂದರು.
ನಾಲ್ಕು ದಿನಗಳ ಹಿಂದೆ ಫಿಲಿಪ್ ಕ್ಯಾಪಿಟಲ್ ಅಮೆರಿಕಾದಲ್ಲಿ ಹೂಡಿಕೆದಾರರಿಗಾಗಿ ಒಂದು ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಆ ಕಾರ್ಯಕ್ರಮದಲ್ಲಿ ಸುಮಾರು 10,000 ಹೂಡಿಕೆದಾರರು ನನ್ನೊಂದಿಗೆ ಇದ್ದರು. ಆದಾಯವು ಉತ್ತಮವಾಗಿರುವುದರಿಂದ ಅವರು ಭಾರತದಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ ಮತ್ತು ಇದು ಈಗ ಹೂಡಿಕೆಗೆ ಸುರಕ್ಷಿತ ಸ್ಥಳವಾಗಿದೆ ಎಂದರು.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ವಿದೇಶಿ ನೇರ ಹೂಡಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದು ಹೇಳಿದರು.
ನಾವು ಹೆಚ್ಚಿನ ಹೂಡಿಕೆಯನ್ನು ಎಂಎಸ್ಎಂಇಗಳಿಗಾಗಿ ಮಾಡಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೇ, ನಾವು ಎಂಎಸ್ಎಂಇಗಳ ವ್ಯಾಖ್ಯಾನವನ್ನು ಕೂಡಾ ಬದಲಾಯಿಸಲು ಬಯಸಿದ್ದೇವೆ. ಉತ್ಪಾದನಾ ವಲಯ ಮತ್ತು ಸೇವಾ ವಲಯವನ್ನು ಪ್ರತ್ಯೇಕವಾಗಿ ವರ್ಗೀಕರಿಸಲಾಗಿದೆ ಎಂದರು.
ಸೂಕ್ಷ್ಮ ಉದ್ಯಮಕ್ಕೆ ಸಂಬಂಧಿಸಿದಂತೆ, ಸ್ಥಾವರ, ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹೂಡಿಕೆಯ ಮಿತಿ 25 ಲಕ್ಷ ರೂ. ಆಗಿದ್ದು, ಈಗ 1 ಕೋಟಿ ರೂ. ಈ ಹಿಂದೆ ವಹಿವಾಟು 10 ಲಕ್ಷವಾಗಿತ್ತು, ಈಗ ನಾವು ಅದನ್ನು 5 ಕೋಟಿ ರೂ.ಗೆ ತೆಗೆದುಕೊಂಡಿದ್ದೇವೆ ಎಂದು ಅವರು ಹೇಳಿದರು.