ಚೆನ್ನೈ, ಜು 05 (DaijiworldNews/PY): ತಾಯಿಯೋರ್ವಳು ಮಗಳನ್ನು ಕೊಂಡು ತಾನು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ಒಂದು ವರ್ಷದ ಮಗಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವರನ್ನು ಪ್ರಿಯಾಂಕಾ (22) ಎನ್ನಲಾಗಿದೆ.
ಮೂರು ವರ್ಷದ ಹಿಂದೆ ಪ್ರಿಯಾಂಕ ಬಾಲಮುರುಗನ್ನೊಂದಿಗೆ ವಿವಾಹವಾಗಿತ್ತು. ಇವರಿಗೆ ಒಂದು ವರ್ಷದ ಮಗಳಿದ್ದಳು.
ಶುಕ್ರವಾರದಂದು ದಂಪತಿಗಳ ವಿವಾಹ ವಾರ್ಷಿಕೋತ್ಸವದ ಜೊತೆ ತಮ್ಮ ಮಗಳ ಒಂದು ವರ್ಷದ ಹುಟ್ಟುಹಬ್ಬವೂ ಇತ್ತು. ತನ್ನ ಪತಿ ವಿವಾಹ ವಾರ್ಷಿಕೋತ್ಸವ ಹಾಗೂ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಎಂದು ಕೊಂಡಿದ್ದಳು. ಆದರೆ, ಆಕೆ ಅಂದುಕೊಂಡಂತೆ ಆಕೆಯ ಪತಿ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಲ್ಲ. ಈ ಕಾರಣಕ್ಕೆ ದಂಪತಿಗಳ ಜಗಳ ನಡೆದಿದೆ.
ಈ ವಿಚಾರಕ್ಕೆ ಬೇಸರಗೊಂಡ ಪ್ರಿಯಾಂಕ ತನ್ನ ಮಗಳೊಂದಿಗೆ ಸೀದಾ ರೂಂಗೆ ಹೋಗಿದ್ದು, ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮುರುಗನ್ ರೂಂಗೆ ತೆರಳಿದಾಗ ಪ್ರಿಯಾಂಕ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ, ಪ್ರಿಯಾಂಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಒಂದು ವರ್ಷದ ಮಗಳ ಕತ್ತು ಹಿಸುಕಿ ಹತ್ಯೆ ಮಾಡಿದ್ದಳು. ಈ ಬಗ್ಗೆ ಬಾಲಮುರುಗನ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.