ಚಿಕ್ಕಮಗಳೂರು, ಜು. 05 (DaijiworldNews/MB) : ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾನುವಾರ ರಾಜ್ಯದಾದ್ಯಂತ ಸಂಪೂರ್ಣ ಲಾಕ್ಡೌನ್ ಮಾಡಲಾಗಿದ್ದು ಈ ನಡುವೆ ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಮತ್ತು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಲಾಕ್ಡೌನ್ ಉಲ್ಲಂಘನೆ ಮಾಡಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದಾರೆ ಎಂದು ವರದಿ ತಿಳಿಸಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಪ್ರವಾಸಿ ಸ್ಥಳಗಳಾದ ದೇವರಮನೆಗುಡ್ಡ, ಹೇಮಾವತಿ ನದಿ ಮೂಲ, ಬಲ್ಲಾಳರಾಯನ ದುರ್ಗಕ್ಕೆ ಯಾವುದೇ ಸಾಮಾಜಿಕ ಅಂತರವೂ ಇಲ್ಲದೇ ಭೇಟಿ ನೀಡಿದ್ದು ಈ ಸಂದರ್ಭದಲ್ಲಿ ಸುಮಾರು ಸುಮಾರು 30 ರಿಂದ 40 ಜನ ಭಾಗಿಯಾಗಿದ್ದರು. ಈ ಮೂಲಕ ಸಚಿವರು ಹಾಗೂ ಶಾಸಕರು ಭಾನುವಾರದ ಲಾಕ್ಡೌನ್ನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು ಹಾಗೆಯೇ ಶಾಸಕ ಕುಮಾರಸ್ವಾಮಿ ಮುಖಕ್ಕೆ ಮಾಸ್ಕ್ ಕೂಡ ಧರಿಸಿಲ್ಲ.
ಮಾಸ್ಕ್ ಧರಿಸದಿದ್ದಲ್ಲಿ ಹಾಗೂ ಭಾನುವಾರ ಲಾಕ್ಡೌನ್ ಉಲ್ಲಂಘಿಸಿ ಜನಸಾಮಾನ್ಯರು ಹೊರಬಂದಲ್ಲಿ ದಂಡ ವಿಧಿಸಲಾಗುತ್ತದೆ. ಆದರೆ ಶಾಸಕರೇ ಈ ರೀತಿ ಮಾಡುವುದು ಸರಿಯಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.