ಬೆಂಗಳೂರು, ಜು 05 (DaijiworldNews/PY): ಪ್ರಧಾನಿ ಮೋದಿ ಅವರು ಲೇಹ್ಗೆ ಹೋಗಿ ಬಂದಿದ್ದಾರೆ. ಅಲ್ಲಿಗೆ ಹೋಗಿ ಬಂದ ಬಳಿಕ ಅಲ್ಲಿನ ಸ್ಥಿತಿಯ ಬಗ್ಗೆ ಜನರಿಗೆ ತಿಳಿಸಬೇಕಲ್ಲವೇ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೂನ್ 15ರಂದು ಭಾರತ ಚೀನಾ ಗಡಿಯಲ್ಲಿ ಏನಾಗಿದೆ ಎನ್ನುವುದನ್ನು ಜನರಿಗೆ ಪ್ರಧಾನಿ ಮೋದಿ ಅವರು ಹೇಳಬೇಕು. ಪ್ರಧಾನಿ ಮೋದಿ ಅವರ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಪ್ರಧಾನಿ ಮೋದಿ ಅವರು ಏನು ಮಾಡುತ್ತಿದ್ದಾರೆ ಎನ್ನುವ ಬಗ್ಗೆ ತಿಳಿಯುವುದಿಲ್ಲವೇ ಎಂದು ಕೇಳಿದರು.
ಈ ವಿಚಾರದ ಬಗ್ಗೆ ನಾವು ಮುಂದಿನಿಂದಲೂ ಕೇಳುತ್ತಿದ್ದೇವೆ. ಆದರೆ, ಪ್ರಧಾನಿ ಮೋದಿ ಅವರು ಈ ಬಗ್ಗೆ ಹೇಳುತ್ತಿಲ್ಲ. ಈಗ ಜನರ ಎದುರು ಯಾವ ವಿಚಾರದ ಬಗ್ಗೆ ಮಾತನಾಡುತ್ತಾರೆ ಎನ್ನುವುದನ್ನು ನಿರೀಕ್ಷಸಬೇಕು. ನಾವು ಯಾವುದೇ ಸಲಹೆ ನೀಡಿದರೂ ಕೂಡಾ ನಮ್ಮನ್ನು ದೇಶದ್ರೋಹಿಗಳೆನ್ನುತ್ತಾರೆ. ಹಾಗಾಗಿ ನಿಜವಾದ ವಿಚಾರವನ್ನು ಅವರೇ ಹೇಳಬೇಕು ಎಂದು ತಿಳಿಸಿದರು.
ಪ್ರಸ್ತುತ ಒಂದು ಕಡೆ ಕೊರೊನಾ ಕಾಟವಾದರೆ, ಇನ್ನೊಂದು ಕಡೆ ಚೀನಾದ ಉಪಟಳ. ಇಂತಹ ಸಂದರ್ಭದಲ್ಲಿ ನಾವು ಸೈನಿಕರಿಗೆ ಬೆಂಬಲ ನೀಡಬೇಕು. ನಮ್ಮ ಭೂಮಿಯ ಒಂದಿಚು ಜಾಗವನ್ನು ಕೂಡಾ ಬೇರೆಯವರಿಗೆ ಬಿಟ್ಟುಕೊಡಬಾರದು. ನಾವು ಬೆಂಬಲ ಕೊಡುತ್ತೇವೆ ಎಂದರು.