ಬೆಂಗಳೂರು, ಜು. 06 (DaijiworldNews/MB) : ಜನರು ಸಮಸ್ಯೆಯಲಿದ್ದಾರೆ, ನಮ್ಮನ್ನು ಕೆಲಸ ಮಾಡಲು ಬಿಡಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರಲ್ಲಿ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದಾರೆ.
ಕಳೆದ ಎರಡು ವಾರಗಳಿಂದ ಸಿದ್ಧರಾಮಯ್ಯ ಹಾಗೂ ಸಚಿವ ಶ್ರೀ ರಾಮುಲು ನಡುವೆ ಟ್ವೀಟ್ ವಾರ್ ನಡೆಯುತ್ತಿದ್ದು ಭಾನುವಾರ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ಗೆ ಸೋಮವಾರ ರಾಮುಲು ಅವರು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯನವರೇ, ನಾಡು ಸಂಕಷ್ಟದಲ್ಲಿದೆ, ಜನರು ಸಮಸ್ಯೆಯಲಿದ್ದಾರೆ, ಕೊರೊನಾವನ್ನು ಗೆಲ್ಲಬೇಕಿದೆ, ಇದು ಕೆಲಸ ಮಾಡೋ ಸಮಯ, ನಾಡಿನ ಜನತೆಗೆ ಕೆಲಸ ಮಾಡಿ, ಕೆಲಸ ಮಾಡಲು ಬಿಡಿ. ನಿಮ್ಮಿಂದ ಇಷ್ಟು ಕನಿಷ್ಟ ಮಟ್ಟದ ಸಹಕಾರವನ್ನು ಜನತೆಯ ಪರವಾಗಿ ಕೇಳುತ್ತೇನೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಹಾಗೂ ಸರ್ಕಾರಗಳ ಮೇಲೆ ಆರೋಪ ಮಾಡೋದಕ್ಕೂ ಮುನ್ನ, ತಾವು ಕಾಶ್ಮೀರದಿಂದ-ಕನ್ಯಾಕುಮಾರಿಯವರೆಗೂ ಆರೋಪ ಮಾಡಿ ಆರೋಪಿಗಳಾಗಿರುವ ನಿಮ್ಮ ಪಕ್ಷದ 'ರಾಜ'-'ಮಹಾರಾಜ' ರ ಬಗ್ಗೆ ಗಮನ ಹರಿಸುವುದು ಒಳಿತಲ್ಲವೇ ಸಿದ್ಧರಾಮಯ್ಯನವರೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಭಾನುವಾರ ಲೂಟಿ ಹೊಡೆದಿದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಶ್ರೀ ರಾಮುಲು ಸವಾಲು ಹಾಕಿದ್ದಾರೆ. ರಾಮುಲು ಅವರೇ, ಬಳ್ಳಾರಿಯ ನಿಮ್ಮ ಅಣ್ತಮ್ಮಂದಿರು ಇದೇ ರೀತಿ ಸವಾಲು ಹಾಕಿ ಕೊನೆಗೆ ದಾಖಲೆ ಬಿಡುಗಡೆ ಮಾಡಿದಾಗ ಜೈಲು ಸೇರಿದ್ದರು. ಸವಾಲೆಸೆಯುವಾಗ ಇದು ನಿಮ್ಮ ಗಮನದಲ್ಲಿರಲಿ ಎಂದು ಸಿದ್ಧರಾಮಯ್ಯನವರು ಟ್ವೀಟ್ ಮಾಡಿದ್ದರು.