ನವದೆಹಲಿ, ಜು 06 (Daijiworld News/MSP): ಹೆಚ್ಚುತ್ತಿರುವ ಕೊವೀಡ್ ಪ್ರಕರಣಗಳ ಕುರಿತು ಕಿಡಿ ಕಾರಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮೂಲಕ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದು" ಭವಿಷ್ಯದ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ಕೇಸ್ ಸ್ಟಡೀಸ್ ನಲ್ಲಿ COVID-19 ಅನ್ನು ನಿರ್ವಹಿಸುದರಲ್ಲಿ ಮೋದಿ ಸರ್ಕಾರದ ವೈಫಲ್ಯದ ಬಗ್ಗೆ ಒಳಗೊಂಡಿರುತ್ತದೆ " ಎಂದು ಹೇಳಿದ್ದಾರೆ.
ನೋಟು ಬ್ಯಾನ್, ಜಿಎಸ್ಟಿ ನಿರ್ವಹಣೆಯಲ್ಲಿ ವೈಫಲ್ಯ, ಹಾಗೂ ಕೊವೀಡ್ ನಿಯಂತ್ರಣದಲ್ಲಿ ಸರ್ಕಾರದ ವಿಫಲತೆ ಈ ಮೂರು ಮೋದಿ ಸರ್ಕಾರದ ಪ್ರಮುಖ ಸೋಲಾಗಿದ್ದು ಇದನ್ನು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಲ್ಲಿ ಅಧ್ಯಯನ ಮಾಡಬಹುದು ಎಂದು ಕೇಂದ್ರ ಸರ್ಕಾರದ ವಿರುದ್ದ ವ್ಯಂಗ್ಯವಾಡಿ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ನಿರಂತರವಾಗಿ ಕೇಂದ್ರ ಸರ್ಕಾರದ ವಿರುದ್ಧದ ಟೀಕೆ ನಡೆಸುತ್ತಿದ್ದು, ಈ ಟ್ವೀಟ್ ಜೊತೆಗೆ ಪ್ರಧಾನಿ ಮೋದಿ ಅವರ ಭಾಷಣದ ತುಣುಕು, ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಕೇಸ್ಗಳ ಸಂಖ್ಯೆಯ ಗ್ರಾಫ್ ಮತ್ತು ಜಾಗತಿಕ ಮಟ್ಟದಲ್ಲಿ ಭಾರತ ಮೂರನೇ ಸ್ಥಾನಕ್ಕೆ ತಲುಪಿದೆ ಎಂದು ತೋರಿಸುವ ವಿಡಿಯೋ ಹಂಚಿಕೊಂಡಿದ್ದಾರೆ.