ನವದೆಹಲಿ, ಜು. 06 (DaijiworldNews/MB) : ಭಾರತದಲ್ಲಿ ಕೊರೊನಾ ತನ್ನ ಕರಾಳ ಹಸ್ತ ಚಾಚುತ್ತಲ್ಲೇ ಇದ್ದು ಈಗ ಜಾಗತಿಕವಾಗಿ ರಷ್ಯಾವನ್ನು ಹಿಂದಿಕ್ಕಿ ಭಾರತ ಮೂರನೇ ಸ್ಥಾನಕ್ಕೆ ಏರಿದೆ. ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 24,248 ಹೊಸ ಪ್ರಕರಣಗಳು ವರದಿಯಾಗಿದ್ದು 425 ಮಂದಿ ಸಾವನ್ನಪ್ಪಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,97,413 ಕ್ಕೆ ಏರಿಕೆಯಾಗಿದ್ದು ಈವರೆಗೆ 19,693 ಮಂದಿ ಕೊರೊನಾ ಮಾಹಾಮಾರಿಗೆ ಬಲಿಯಾಗಿದ್ದಾರೆ.
ಕೊರೊನಾ ಸೋಂಕು ಪ್ರಕರಣದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕ ಮೊದಲ ಸ್ಥಾನದಲ್ಲಿದ್ದು ಅಲ್ಲಿ 29 ಲಕ್ಷಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ನಲ್ಲಿ 15 ಲಕ್ಷಕ್ಕೂ ಅಧಿಕ ಜನರು ಸೋಂಕು ಪೀಡಿತರಾಗಿದ್ದಾರೆ. ರಷ್ಯಾವನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಏರಿರುವ ಭಾರತದಲ್ಲಿ 7 ಲಕ್ಷದ ಗಡಿಯತ್ತ ಸೋಂಕಿತರ ಸಂಖ್ಯೆ ಸಮೀಪಿಸಿದೆ. ನಾಲ್ಕನೇ ಸ್ಥಾನಕ್ಕೆ ಇಳಿದಿರುವ ರಷ್ಯಾದಲ್ಲಿ 6 ಲಕ್ಷದ 81 ಸಾವಿರದಷ್ಟು ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಭಾರತದಲ್ಲಿ ಕೊರೊನಾ ಸೋಂಕು ಪ್ರಕರಣಗಳ ತೀವ್ರಗತಿಯ ಏರಿಕೆಯ ನಡುವೆಯೂ 6,97,413 ಸೋಂಕಿತರ ಪೈಕಿ 4,24,433 ಮಂದಿ ಗುಣಮುಖರಾಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಈವರೆಗೆ ಶೇ. 60.85 ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ಇನ್ನು 2,53,287 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.