ನವದೆಹಲಿ, ಜು. 06 (DaijiworldNews/MB) : ''ದೆಹಲಿಯಲ್ಲಿ ಒಟ್ಟು 25 ಸಾವಿರ ಸಕ್ರಿಯ ಕೊರೊನಾ ಪ್ರಕರಣಗಳಿಂದು ಈ ಪೈಕಿ 15 ಸಾವಿರ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತದೆ'' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಿ 1 ಲಕ್ಷದ ಗಡಿ ದಾಟಿದ್ದರೂ ಕೂಡಾ ಈ ಪೈಕಿ 72 ಸಾವಿರ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಸಾವಿನ ಸಂಖ್ಯೆಯೂ ಕೂಡಾ ಕಡಿಮೆಯಾಗಿದೆ. ಹಾಗಾಗಿ ಯಾರೂ ಕೂಡಾ ಆತಂಕಕ್ಕೆ ಒಳಗಾಗಬೇಕಾಗಿಲ್ಲ'' ಎಂದು ತಿಳಿಸಿದ್ದಾರೆ.
''ದೇಶದಲ್ಲೇ ಮೊದಲ ಬಾರಿಗೆ ದೆಹಲಿಯಲ್ಲಿ ಪ್ಲಾಸ್ಮಾ ಬ್ಯಾಂಕ್ ಸ್ಥಾಪನೆ ಮಾಡಿದ್ದೇವೆ. ಈ ಚಿಕಿತ್ಸೆಯಿಂದ ರೋಗಿಗಳ ಆರೋಗ್ಯ ಸ್ಥಿತಿ ಸುಧಾರಿಸಿದೆ. ಆದರೆ ಅಗತ್ಯವಿರುವಷ್ಟು ಪ್ಲಾಸ್ಮಾಗಳು ಸಿಗುತ್ತಿಲ್ಲ. ಜನರು ಸ್ವಯಂ ಪ್ರೇರಣೆಯಿಂದ ಪ್ಲಾಸ್ಮಾ ದಾನ ಮಾಡಬೇಕು. ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗುವುದಿಲ್ಲ. ಯಾರೂ ಭಯ ಪಡಬೇಕಾಗಿಲ್ಲ. ಪ್ಲಾಸ್ಮಾ ದಾನ ಮಾಡುವಂತೆ ಮನವಿ ಕರೆ ಬಂದಲ್ಲಿ ದಯವಿಟ್ಟು ನಿರಾಕರಿಸಬೇಡಿ'' ಎಂದು ಮನವಿ ಮಾಡಿದ್ದಾರೆ.