ಮಡಿಕೇರಿ, ಜು 07 (DaijiworldNews/PY): ಸೋಮವಾರ ಪೇಟೆ ತಾಲೂಕಿನ ಶನಿವಾರಸಂತೆಯ ಬಳಿಯ ಗೋಪಾಲಪುರ ಗ್ರಾಮದಲ್ಲಿ ವರದಿಯಾದ ವಿಚಿತ್ರ ಹಾಗೂ ಅಪರೂಪದ ಪ್ರಕರಣವೊಂದರಲ್ಲಿ, ಮೃತ ವ್ಯಕ್ತಿಯ ಪತ್ನಿ ಮತ್ತು ಮಕ್ಕಳು ಹಾಗೂ ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದ ಕಾರಣ ನಂತರ ಸ್ಥಳೀಯರು ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನಡೆಸಿದ್ದಾರೆ.
ಮೃತ ವ್ಯಕ್ತಿಯನ್ನು ಗೋಪಾಲಪುರದ ಯೂಸುಫ್ ಅಲಿಯಾಸ್ ವರ್ಗೀಸ್ (68) ಎನ್ನಲಾಗಿದೆ.
ಯೂಸುಫ್ ಅಲಿಯಾಸ್ ವರ್ಗೀಸ್ ಅವರು ಕ್ರಿಶ್ಚಿಯನ್ ಕುಟುಂಬದಲ್ಲಿ ಜನಿಸಿದವರಾಗಿದ್ದರು. ಆದರೆ, ಅವರು ಕೆಲವು ವರ್ಷಗಳ ಹಿಂದೆ ಇಸ್ಲಾಂಗೆ ಮತಾಂತರಗೊಂಡಿದ್ದು, ಅವರ ಹೆಸರನ್ನು ಯೂಸುಫ್ ಎಂದು ಬದಲಾಯಿಸಿಕೊಂಡಿದ್ದರು. ಅವರ ಪತ್ನಿ ಹಾಗೂ ಮಕ್ಕಳು ಮಂಗಳೂರಿನಲ್ಲಿ ವಾಸಿಸುತ್ತಿದ್ದು, ಯೂಸುಫ್ ಅವರು ಗೋಪಾಲಪುರದಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು.
ಆರೋಗ್ಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಯೂಸುಫ್ ಅವರನ್ನು ಮಡಿಕೇರಿಯ ಕೊಡಗು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಜು 4ರಂದು ಸಾವನ್ನಪ್ಪಿದ್ದರು. ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ಯಾವುದೇ ಸಂಬಂಧಿಕರು ಇಲ್ಲದೇ ಇದ್ದ ಕಾರಣ ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು.
ಘಟನೆಯ ಬಗ್ಗೆ ತಿಳಿದ ಗೋಪಾಲಪುರದ ಕೆಲವು ಸ್ಥಳೀಯರು ಹಾಗೂ, ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸಂಪರ್ಕಿಸಲು ಪ್ರಯತ್ನಿಸಿದರು, ಆದರೆ, ಅವರು ಈ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಮೃತದೇಹವನ್ನು ಗೋಪಾಲಪುರಕ್ಕೆ ತಂದು ಹಿಂದೂ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಿದ್ದಾರೆ.