ಬಳ್ಳಾರಿ, ಜು. 07 (DaijiworldNews/MB) : ಆಶಾ ಕಾರ್ಯಕರ್ತೆಯರಿಗೆ ನೀಡುತ್ತಿರುವ ಮಾಸಿಕ ಗೌರವ ಧನವನ್ನು 12 ಸಾವಿರಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಜುಲೈ 10 ರಿಂದ ಅನಿರ್ಧಿಷ್ಟಾವಧಿವಾಗಿ ಮುಷ್ಕರ ನಡೆಸಲು ಆಶಾ ಕಾರ್ಯಕರ್ತೆಯರು ತೀರ್ಮಾನಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿ ಮಾಹಿತಿ ನೀಡಿರುವ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಅವರು, ಕೊರೊನಾ ಸಂದರ್ಭದಲ್ಲಿ ಕರ್ನಾಟಕದ ಆಶಾ ಕಾರ್ಯಕರ್ತೆಯರು ಹಗಲಿರುಳು ಕಾರ್ಯನಿರ್ವಹಿಸುತ್ತಿದ್ದು ಕೇಂದ್ರ, ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ಆದರೆ ಇದರಿಂದಾಗಿಯೇ ನಮಗೆ ಜೀವನ ನಡೆಸಲು ಸಾಧ್ಯವಿಲ್ಲ. ಕಳೆದ ಮೂರು ತಿಂಗಳಿನಿಂದ ಕೇಂದ್ರದಿಂದ ನಮಗೆ ತಿಂಗಳಿಗೆ ನೀಡುವ ೨ ಸಾವಿರ ರೂಪಾಯಿ ಗೌರವಧನವೂ ಕೂಡಾ ಬಂದಿಲ್ಲ. ಒಂದು ತಿಂಗಳಿನಿಂದ ರಾಜ್ಯ ಸರ್ಕಾರದಿಂದಲ್ಲೂ ಬಂದಿಲ್ಲ. ನಮ್ಮ ಮಾಸಿಕ ವೇತನ 12 ಸಾವಿರ ನಿಗದಿ ಮಾಡುವಂತೆ ಆಗ್ರಹಿಸಿ ಜುಲೈ 10 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಹಲವು ಭಾರೀ ಸಚಿವರಿಗೆ, ಶಾಸಕರಿಗೆ ಮಾಸಿಕ 12 ಸಾವಿರ ಗೌರವ ಧನ ನಿಗದಿ ಮಾಡುವಂತೆ ಒತ್ತಾಯಿಸಿ ಮನವಿ ಮಾಡಿದ್ದೇವೆ. ಆದರೆ ಈ ಬಗ್ಗೆ ಸರ್ಕಾರ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಹಾಗಾಗಿ ಜುಲೈ 10 ರಿಂದ ಮುಷ್ಕರ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಕೊರೊನಾ ಸಂದರ್ಭದಲ್ಲಿ ಕಾರ್ಯ ನಿರ್ವಹಿಸಿದ್ದಕ್ಕೆ ರಾಜ್ಯ ಸರ್ಕಾರ 42 ಸಾವಿರ ಆಶಾಗಳಿಗೆ ತಲಾ ಮೂರು ಸಾವಿರ ರೂ ಪ್ರೋತ್ಸಾಹ ಧನ ನೀಡುತ್ತೇವೆ ಎಂದು ಹೇಳಿದೆ. ಸಾಂಕೇತಿಕವಾಗಿ ಎಲ್ಲಾ ಜಿಲ್ಲೆಯಲ್ಲಿ ಸಚಿವರು ನೀಡಿದ್ದಾರೆ. ಆದರೆ ಶೇ. 40 ರಷ್ಟು ಆಶಾಗಳಿಗಿಂತ ಹೆಚ್ಚಿಲ್ಲ. ಇನ್ನೂ 25 ಸಾವಿರ ಆಶಾಗಳಿಗೆ ಈ ಧನ ಲಭಿಸಿಲ್ಲ ಎಂದು ಆರೋಪ ಮಾಡಿದ್ದಾರೆ.