ನವದೆಹಲಿ, ಜು 07 (DaijiworldNews/PY): ದೇಶದಲ್ಲಿ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳು ಹಾಗೂ ಅದರ ಪೂರೈಕೆ ಸಾಕಷ್ಟಿರುವುದರಿಂದ ಅಗತ್ಯ ಉತ್ಪನ್ನಗಳಲ್ಲ. ಆದ್ದರಿಂದ, 1955ರ ಅಗತ್ಯ ಸರಕುಗಳ ಕಾಯ್ದೆಯ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ಲೀನಾ ನಂದನ್ ಮಂಗಳವಾರ ಹೇಳಿದ್ದಾರೆ.
ಕೊರೊನಾವೈರಸ್ ಪ್ರಾರಂಭವಾದ ಸಂದರ್ಭ ಮಾರ್ಚ್ 13 ರಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ಗಳನ್ನು 100 ದಿನಗಳವರೆಗೆ ಅಗತ್ಯ ಸರಕುಗಳೆಂದು ಘೋಷಿಸಿತ್ತು.
ಈ ಎರಡು ಉತ್ಪನ್ನಗಳನ್ನು ಜೂನ್ 30 ರವರೆಗೆ ಅಗತ್ಯ ವಸ್ತುಗಳೆಂದು ಘೋಷಿಸಲಾಗಿತ್ತು. ದೇಶದಲ್ಲಿಈ ಉತ್ಪನ್ನಗಳ ಪೂರೈಕೆ ಸಾಕಷ್ಟು ಇರುವುದರಿಂದ ನಾವು ಮತ್ತಷ್ಟು ವಿಸ್ತರಿಸುತ್ತಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿದ ನಂತರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ನಾವು ಎಲ್ಲಾ ರಾಜ್ಯಗಳೊಂದಿಗೆ ಪರಿಶೀಲಿಸಿದ್ದೇವೆ ಮತ್ತು ಈ ಎರಡು ವಸ್ತುಗಳ ಸಾಕಷ್ಟು ಪೂರೈಕೆ ಇದೆ ಎಂದು ಅವರಿಂದ ಮಾಹಿತಿ ಪಡೆದಿದ್ದೇವೆ. ಎಂದರು.
ಮಾಸ್ಕ್ಗಳು (2-ಪ್ಲೈ ಮತ್ತು 3-ಪ್ಲೈ ಸರ್ಜಿಕಲ್ ಮಾಸ್ಕ್, ಎನ್ 95 ಮಾಸ್ಕ್) ಮತ್ತು ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ಸರಕುಗಳ ಕಾಯ್ದೆಯಡಿ ಜಾರಿಗೆ ತರಲಾಗಿತ್ತು. ಈ ವಸ್ತುಗಳ ಉತ್ಪಾದನೆ, ವಿತರಣೆ ಮತ್ತು ಬೆಲೆಗಳನ್ನು ನಿಯಂತ್ರಿಸಲು ರಾಜ್ಯಗಳಿಗೆ ಅಧಿಕಾರ ನೀಡಿತ್ತು ಎಂದು ತಿಳಿಸಿದರು.