ತಿರುವನಂತಪುರಂ, ಜು. 07 (DaijiworldNews/MB) : ಅಕ್ರಮ ಚಿನ್ನ ಸಾಗಾಟದ ಆರೋಪಿಯೊಂದಿಗೆ ನಂಟು ಇದ್ದ ಆರೋಪದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ.
ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್ ಮೂಲಕವಾಗಿ ಚಿನ್ನಸಾಗಾಟ ಮಾಡಿದ ಪ್ರಕರಣದ ಮುಖ್ಯ ಆರೋಪಿಯಾದ ಸ್ವಪ್ನ ಸುರೇಶ್ನೊಂದಿಗೆ ನಂಟು ಹೊಂದಿದೆ ಎಂಬ ಆರೋಪದಲ್ಲಿ ಎಂ ಶಿವಶಂಕರ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದ್ದು ಈ ಪ್ರಕರಣದ ಬಗ್ಗೆ ವಿವರಣೆ ನೀಡಲು ಸರ್ಕಾರ ಸೂಚಿಸಿದೆ. ತನ್ನನ್ನು ವಜಾಗೊಳಿಸಿದ ಬಳಿಕ ಶಿವಶಂಕರ್ ಅವರು ದೀರ್ಘ ಕಾಲದ ರಜೆಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಏತನ್ಮಧ್ಯೆ ಕೇರಳ ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿಯಾಗಿಯೂ ಇರುವ ಶಿವಶಂಕರ್ ಅವರು ಆ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿ ಪಕ್ಷಗಳು ಶಿವಶಂಕರ್ ಅವರು ಕೊರೊನಾ ರೋಗಿಗಳ ಹಾಗೂ ಶಂಕಿತರ ಮಾಹಿತಿಯನ್ನು ಒದಗಿಸಲು ಅಮೆರಿಕದ ಸ್ಪ್ರಿಂಕ್ಲರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಎಂದು ಆರೋಪ ಮಾಡಿದ್ದು ಮುಖ್ಯಮಂತ್ರಿಗಳ ಕಚೇರಿ ಕ್ರಿಮಿನಲ್ಗಳ ಅಡ್ಡೆಯಾಗಿ ಬದಲಾಗಿದೆ. ಚಿನ್ನ ಅಕ್ರಮ ಸಾಗಾಟದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.
ಇನ್ನು ಐಎಎಸ್ ಅಧಿಕಾರಿ ಮಿರ್ ಮೊಹಮ್ಮದ್ ಅವರನ್ನು ಶಿವಶಂಕರ್ ಅವರ ಸ್ಥಾನಕ್ಕೆ ನೇಮಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.