ಕಾನ್ಪುರ, ಜು 08 (DaijiworldNews/PY): ವಿಶೇಷ ಕಾರ್ಯಪಡೆ ಮತ್ತು ಹಮೀರ್ಪುರ ಪೊಲೀಸರ ತಂಡ ಬುಧವಾರ ಮುಂಜಾನೆ ಹಮೀರ್ಪುರದಲ್ಲಿ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಸಹಚರ ಅಮರ್ ದುಬೆ ಎಂಬಾತನನ್ನು ಎನ್ಕೌಂಟರ್ ಮಾಡಿದ್ದಾರೆ.
ಕಾನ್ಪುರದಲ್ಲಿ ಇತ್ತೀಚೆಗೆ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 8 ಮಂದಿ ಪೊಲೀಸರು ಸಾವನ್ನಪ್ಪಿದ್ದಾರೆ. ಕಾನ್ಪುರ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಆತನ ಬಗ್ಗೆ ಮಾಹಿತಿ ನೀಡಿದರೆ, 25 ಸಾವಿರ ರೂ.ಗಳ ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದರು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಎಡಿಜಿ) ಕಾನೂನು ಮತ್ತು ಸುವ್ಯವಸ್ಥೆ ಪ್ರಶಾಂತ್ ಕುಮಾರ್ ಅವರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಪೊಲೀಸರಿಗೆ ವಿಕಾಸ್ ದುಬೆ ಹರಿಯಾಣದ ಫರಿದಾಬಾದ್ನಲ್ಲಿ ಓಯೊ ಹೊಟೇಲ್ವೊಂದರಲ್ಲಿ ತಂಗಿರುವ ಮಾಹಿತಿ ದೊರೆತಿದ್ದು, ಮಾಹಿತಿ ಮೇರೆಗೆ ಪೊಲೀಸರು ಆ ಸ್ಥಳಕ್ಕೆ ತೆರಳುವಷ್ಟರಲ್ಲಿ ಆತ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಹೊಟೇಲ್ನಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ಮಾಡಿದ್ದು, ಸಿಸಿಟಿವಿ ದೃಶ್ಯದಲ್ಲಿರುವಂತೆ ಕಪ್ಪು ಶರ್ಟ್, ಜೀನ್ಸ್ ಹಾಗೂ ಮಾಸ್ಕ್ ಧರಿಸಿರುವ ವ್ಯಕ್ತಿ ವಿಕಾಸ್ ದುಬೆ ಇರಬಹುದು ಎಂದು ಗುರುತಿಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಿಕಾಸ್ ದುಬೆ ತಂಗಿದ್ದ ಮನೆಯನ್ನು ಪರಶೀಲನೆ ಮಾಡಿದ ಸಂದರ್ಭ ಅಲ್ಲಿ ಪೊಲೀಸರಿಗೆ ಪೊಲೀಸರು 2 ಕೆ.ಜಿಯಷ್ಟು ಸ್ಫೋಟಕ ಸಾಮಗ್ರಿ, ಆರು ನಾಡ ಪಿಸ್ತೂಲ್ಗಳು, 15 ಕಚ್ಚಾ ಬಾಂಬ್ಗಳು ಹಾಗೂ 25 ಕ್ಯಾಟ್ರಿಜ್ಗಳು ದೊರೆತಿದ್ದು, ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ.
ವಿಕಾಸ್ ದುಬೆ ಹಲವಾರು ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಪೊಲೀಸರು ತನ್ನನ್ನು ಪತ್ತೆಹಚ್ಚುತ್ತಿದ್ದಾರೆ ಎನ್ನುವ ವಿಷಯವನ್ನು ಮೊದಲೇ ತಿಳಿದುಕೊಂಡಿದ್ದ ಆತ ತನ್ನ ಸಹಚರರೊಂದಿಗೆ ದಾರಿಗೆ ಅಡ್ಡಲಾಗಿ ಕಲ್ಲು-ಗುಂಡುಗಳನ್ನು ಜೋಡಿಸಿದ್ದು, ದೂರದಲ್ಲಿ ನಿಂತು ಗುಂಡು ಹಾರಿಸಿದ್ದರು. ಗುಂಡಿನ ದಾಳಿಗೆ ಓರ್ವ ಡಿವೈಎಸ್ಪಿ ಸೇರಿ ಎಂಟು ಮಂದಿ ಪೊಲೀಸರು ಸಾವನ್ನಪ್ಪಿದ್ದರು.