ತೆಲಂಗಾಣ, ಜು. 08 (DaijiworldNews/MB) : ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ತನ್ನೊಂದಿಗೆ ವಾಗ್ವಾದ ಮಾಡಿದ ಕಾರಣಕ್ಕೆ ಜೆಸಿಬಿ ಚಾಲಕ ತನ್ನ ವಾಹನದ ಮುಂಭಾಗದಿಂದ ಹೊಡೆದುರುಳಿಸಿದ ಆಘಾತಕಾರಿ ಘಟನೆ ತೆಲಂಗಾಣ ರಾಜ್ಯದ ಮುಲುಗು ಜಿಲ್ಲೆಯಲ್ಲಿ ಮಂಗಳವಾರ ನಡೆದಿದ್ದು ಇದರ ವಿಡಿಯೋ ಈಗ ವೈರಲ್ ಆಗಿದೆ.
ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಚಾಲಕನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಪೇಟಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್, ಆ ವ್ಯಕ್ತಿ ಕುಡಿದು ಚಾಲಕನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿದ್ದಾನೆ. ಇದರಿಂದ ಕೋಪಗೊಂಡ ಜೆಸಿಬಿ ಚಾಲಕ ಆ ವ್ಯಕ್ತಿಗೆ ಜೆಸಿಬಿಯ ಮುಂಭಾಗದಿಂದ ಹೊಡೆದುರುಳಿಸಿದ್ದಾನೆ ಎಂದು ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದು ಟ್ವೀಟ್ ಮಾಡಿರುವ ೫೦ ಸೆಕೆಂಡ್ಗಳ ಈ ವಿಡಿಯೋದಲ್ಲಿ ಜೆಸಿಬಿ ಚಾಲಕ ತನ್ನೊಂದಿಗೆ ವಾಗ್ವಾದ ಮಾಡುತ್ತಿರುವ ಮದ್ಯಪಾನ ಮಾಡಿದ ವ್ಯಕ್ತಿಗೆ ಜೆಸಿಬಿಯ ಮುಂಭಾಗದಿಂದ ಹೊಡೆಯುವುದು ಕಾಣಬಹುದಾಗಿದೆ.
ಕೆಲವು ವಾರಗಳ ಹಿಂದೆ ಆಂದ್ರಪ್ರದೇಶದ ತಿರುಪತಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯ ಮೃತ ದೇಹದ ಅಂತ್ಯ ಸಂಸ್ಕಾರಕ್ಕೆ ಜೆಸಿಬಿಯನ್ನು ಉಪಯೋಗಿಸಲಾಗಿತ್ತು. ಈ ವಿಷಯ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ ಅಧಿಕಾರಿಯೋರ್ವರು ಮೃತ ಸೋಂಕಿತ ವ್ಯಕ್ತಿ 175 ಕೆಜಿ ತೂಕವಿದ್ದ ಕಾರಣದಿಂದ ಮೃತರ ಕುಟುಂಬದ ಅನುಮತಿ ಪಡೆದು ಜೆಸಿಬಿ ಬಳಸಿ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ತಿಳಿಸಿದ್ದರು.