ಲಡಾಖ್, ಜು. 08 (DaijiworldNews/MB) : ಚೀನಾದ ಸೈನಿಕರು ಭಾರತದ ಗಡಿ ಪ್ರದೇಶದಿಂದ 2 ಕಿ.ಮೀ ಹಿಂದಕ್ಕೆ ಸರಿದಿದ್ದು ಈ ಮೂಲಕ ಭಾರತ ಚೀನಾ ಸೇನೆ ಗಡಿ ಪ್ರದೇಶದಿಂದ ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆ ಬುಧವಾರ ಪೂರ್ಣಗೊಂಡಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ವರದಿಯೊಂದರ ಪ್ರಕಾರ, ಭಾರತ ಮತ್ತು ಚೀನಾದ ಸೈನಿಕರನ್ನು ಗಡಿ ಪ್ರದೇಶದಿಂದ ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆ ಇಂದು ಪೆಟ್ರೋಲಿಂಗ್ ಪಾಯಿಂಟ್ 15 ರಲ್ಲಿ ಪೂರ್ಣಗೊಂಡಿದೆ. ಚೀನಾ ಸೇನೆಯು ಇಂದು ಸುಮಾರು 2 ಕಿ.ಮೀ. ಹಿಂದೆ ಸರಿದಿದೆ.
ಉಭಯ ರಾಷ್ಟ್ರಗಳ ನಡುವೆ ಸಂಘರ್ಷ ಉಂಟಾಗಿ ಭಾರತದ 20 ಯೋಧರು ಹುತಾತ್ಮರಾದ ಬಳಿಕ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನ ಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಭಾನುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ನಡುವೆ ಸುಮಾರು ಎರಡು ಗಂಟೆಗಳ ದೂರವಾಣಿ ಸಂಭಾಷಣೆಯ ಬಳಿಕ ಎರಡು ದೇಶಗಳ ಸೈನ್ಯವು ಗಡಿ ಪ್ರದೇಶದಿಂದ ಹಿಂದಕ್ಕೆ ಸರಿಯುವ ಪ್ರಕ್ರಿಯೆ ಸೋಮವಾರದಿಂದ ಆರಂಭವಾಗಿತ್ತು.
ಸೋಮವಾರ ಚೀನಾ ಸೇನೆಯೂ ವಿವಾದಿತ ಭೂ ಪ್ರದೇಶದಿಂದ ಕಾಲ್ಕಿತ್ತು ಸುಮಾರು 1-2 ಕಿ.ಮೀ ಹಿಂದೆ ಸರಿದಿತ್ತು. ಮಂಗಳವಾರವೂ ಕೂಡಾ ಚೀನಾ ಸೇನೆಯು ಹಿಂದೆ ಸರಿದಿತ್ತು. ಹಾಗೆಯೇ ತನ್ನ ತಾತ್ಕಾಲಿಕ ಸೇನಾ ಟೆಂಟ್, ಮೂಲಸೌಕರ್ಯ ರಚನೆಗಳನ್ನು ತೆಗೆದುಹಾಕಿದೆ. ಬುಧವಾರ ಚೀನಾ ಸೇನೆಯು ಸುಮಾರು 2 ಕಿ.ಮೀ. ಹಿಂದಕ್ಕೆ ಸರಿದಿದ್ದು ಉಭಯ ರಾಷ್ಟ್ರಗಳು ತನ್ನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ.