ಮಹಾರಾಷ್ಟ್ರ, ಜು. 08 (DaijiworldNews/MB) : ಸಂವಿಧಾನ ಶಿಲ್ಪಿ ದಿ.ಡಾ.ಬಿಆರ್ ಅಂಬೇಡ್ಕರ್ ಅವರ ಮುಂಬೈನ ದಾದರ್ನಲ್ಲಿರುವ ನಿವಾಸಕ್ಕೆ ನುಗ್ಗಿದ ದುಷ್ಕರ್ಮಿಗಳು ಹಲವು ವಸ್ತುಗಳನ್ನು ನಾಶ ಮಾಡಿರುವ ಮಂಗಳವಾರ ಘಟನೆ ನಡೆದಿದ್ದು ಈ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಮುಂಬೈನ ದಾದರ್ ನಲ್ಲಿರುವ ಅಂಬೇಡ್ಕರ್ ಅವರ ಐತಿಹಾಸಿಕ ರಾಜ್ ಗೃಹ ನಿವಾಸಕ್ಕೆ ಇಬ್ಬರು ಅಪರಿಚಿತ ವ್ಯಕ್ತಿಗಳು ಮಂಗಳವಾರ ಸಂಜೆ ನುಗ್ಗಿದ್ದು ಹಲವು ವಸ್ತುಗಳನ್ನು ನಾಶ ಮಾಡಿದ್ದಾರೆ. ಸಿಸಿಟಿವಿ ಕ್ಯಾಮರಾ, ಗ್ಲಾಸ್ ಪ್ಯಾನ್ಸ್, ಹೂ ಕುಂಡಗಳನ್ನು ಒಡೆದು ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಈವರೆಗೂ ಹಲವು ಕಡೆಗಳಲ್ಲಿ ಅಂಬೇಡ್ಕರ್ ಅವರ ಪ್ರತಿಮೆಗಳನ್ನು ದುಷ್ಕರ್ಮಿಗಳು ದ್ವಂಸಗೊಳಿಸಿರುವ ಘಟನೆಗಳು ವರದಿಯಾಗಿದ್ದು ಇದೀಗ ನಿವಾಸಕ್ಕೆ ನುಗ್ಗಿ ಹಲವು ವಸ್ತುಗಳನ್ನು ನಾಶ ಮಾಡಿದ್ದಾರೆ. ಈ ಘಟನೆಗೆ ವ್ಯಾಪಕವಾಗಿ ಖಂಡನೆ ವ್ಯಕ್ತವಾಗಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಅವರು ಕೂಡಾ ಈ ಘಟನೆಗೆ ಖಂಡನೆ ವ್ಯಕ್ತಪಡಿಸಿದ್ದು ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದಾರೆ.
ಇನ್ನು ದಲಿತ ಸಂಘಟನೆಯ ಸದಸ್ಯರು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದು ವರದಿ ತಿಳಿಸಿದೆ.