ತಿರುವನಂತಪುರ, ಜು. 08 (DaijiworldNews/MB) : ಅಕ್ರಮ ಚಿನ್ನ ಸಾಗಾಟದ ಜಾಲದೊಂದಿಗೆ ಮುಖ್ಯಮಂತ್ರಿ ಕಚೇರಿಗೂ ನೇರವಾದ ಸಂಬಂಧವಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಆಯ್ಕೆ ಕೇಂದ್ರಕ್ಕೆ ಬಿಟ್ಟ ವಿಚಾರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಯುಎಇ ರಾಯಭಾರಿ ಕಚೇರಿ ಹೆಸರಿಗೆ ಬಂದ ಪಾರ್ಸೆಲ್ ಮೂಲಕವಾಗಿ ಚಿನ್ನಸಾಗಾಟ ಮಾಡಿದ ಪ್ರಕರಣದ ಮುಖ್ಯ ಆರೋಪಿಯಾದ ಸ್ವಪ್ನ ಸುರೇಶ್ನೊಂದಿಗೆ ನಂಟು ಇದ್ದ ಆರೋಪದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಕಾರ್ಯದರ್ಶಿ ಎಂ ಶಿವಶಂಕರ್ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ. ಈ ವಿಚಾರ ಕೇರಳದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೇರಳ ಸರ್ಕಾರಕ್ಕೂ ಈ ಚಿನ್ನ ಕಳ್ಳಸಾಗಾಣಿಕೆಗೂ ನಂಟಿದೆ ಎಂದು ವಿಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಆರೋಪ ಮಾಡಿದೆ. ಕಾಂಗ್ರೆಸ್ ನಾಯಕರು, ಮುಖ್ಯಮಂತ್ರಿಗಳ ಕಚೇರಿ ಕ್ರಿಮಿನಲ್ಗಳ ಅಡ್ಡೆಯಾಗಿ ಬದಲಾಗಿದೆ ಎಂದು ಆರೋಪಿಸಿದ್ದು ಚಿನ್ನ ಅಕ್ರಮ ಸಾಗಾಟದ ಬಗ್ಗೆ ಸಿಬಿಐ ತನಿಖೆ ನಡೆಸುವಂತೆಯೂ ಆಗ್ರಹಿಸಿದ್ದಾರೆ.
ಬಿಜೆಪಿ ನಾಯಕರು ಮುಖ್ಯಮಂತ್ರಿ ಕಚೇರಿಯು ಕಳ್ಳಸಾಗಾಣಿಕೆ ಜಾಲದಲ್ಲಿ ನೇರವಾಗು ನಂಟು ಹೊಂದಿದೆ. 2017ರಿಂದಲೇ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆರೋಪಿ ಸ್ವಪ್ನಾ ಪರಿಚಯ ಇರುವವರು ಎಂದು ದೂರಿದ್ದಾರೆ.