ಶಿವಮೊಗ್ಗ, ಜು 08 (DaijiworldNews/PY): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಹೆಚ್ಚಾಗುತ್ತಿದೆ. ಸರ್ಕಾರದೊಂದಿಗೆ ವಿರೋಧ ಪಕ್ಷವೂ ನೆರವಾಗಬೇಕು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸಲು ಏನು ಮಾಡಬೇಕು ಎನ್ನುವ ನಿಟ್ಟಿನಲ್ಲಿ ಯೋಚನೆ ಮಾಡಬೇಕು. ಇದರೊಂದಿಗೆ ಸರ್ಕಾರದ ಜೊತೆ ವಿರೋಧ ಪಕ್ಷವೂ ಕೈಜೋಡಿಸಬೇಕು. ಸಲಹೆ ಸೂಚನೆಗಳನ್ನು ನೀಡಬೇಕು ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದವರು. ಅವರೊಂದಿಗೆ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ರಾಜ್ಯ ಸರ್ಕಾರವು ಭ್ರಷ್ಟ ಮಂತ್ರಿ ಇದ್ದರೆ ಅವರನ್ನು ಇಟ್ಟುಕೊಳ್ಳುವುದಿಲ್ಲ. ಹಾಗಾಗಿ ಸಿದ್ದರಾಮಯ್ಯ ಅವರು ಸುಮ್ಮನೆ ಗಾಳಿಯಲ್ಲಿ ಕಲ್ಲು ಹೊಡೆದಂತೆ ಮಾಡುವುದು ಬೇಡ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ಸುಖಾಸುಮ್ಮನೆ ಭ್ರಷ್ಟಾಚಾರ ಆಗಿದೆ ಎಂದು ಹೇಳಿ ಅಧಿಕಾಇಗಳು ಬರಲಿ, ದಾಖಲೆ ನೀಡುತ್ತೇವೆ ಎಂದು ಹೇಳುವುದು ಒಳ್ಳೆಯದಲ್ಲ. ಕೊರೊನಾ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಪ್ರಯತ್ನ ತಪ್ಪು. ರಾಜ್ಯ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕೊರೊನಾ ಸಮಯದಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವುದು ಸೂಕ್ತವಲ್ಲ ಎಂದರು.
ಆನ್-ಲೈನ್ ಶಿಕ್ಷಣದ ಬಗ್ಗೆ ಮಾತನಾಡಿದ ಅವರು, ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದು ಸಾಧ್ಯವಿಲ್ಲ. ಕೊರೊನಾದ ಸಂದರ್ಭ ಮಕ್ಕಳಿಗೆ ಯಾವ ರೀತಿಯಾಗಿ ಶಿಕ್ಷಣ ನೀಡಬೇಕು ಎನ್ನುವುದಕ್ಕೆ ಸ್ಪಷ್ಟತೆ ಬೇಕು ಎಂದು ತಿಳಿಸಿದರು.