ಮೈಸೂರು, ಜು. 08 (DaijiworldNews/MB) : ''ಕೊರೊನಾ ನಿರ್ವಹಣೆಯ ವೆಚ್ಚದ ಲೆಕ್ಕ ರಾಜ್ಯ ಸರ್ಕಾರ ನೀಡದಿದ್ದರೆ ನಾವು ಬಿಡಲ್ಲ'' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬುಧವಾರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
''ಕೊರೊನಾ ಸಂದರ್ಭದಲ್ಲಿ ಬಿಎಸ್ವೈ ಸರ್ಕಾರ ಜನರಿಗೆ ಏನು ಮಾಡಿದೆ? ಬಡವರಿಗೆ ಊಟ ನೀಡಿಲ್ಲ. ಕೆಲಸ ಕಳೆದು ಕೊಂಡ ಜನರು ಬೆಂಗಳೂರು ಬಿಟ್ಟು ತಮ್ಮ ಊರಿಗೆ ಮರಳುತ್ತಿದ್ದಾರೆ. ಸರ್ಕಾರ ಈಗ ತಾವು ಕೊರೊನಾ ನಿರ್ವಹಣೆಗೆ ಮಾಡಿದ ವೆಚ್ಚದ ಬಗ್ಗೆ ಮಾಹಿತಿ ನೀಡಬೇಕು. ಇಲ್ಲದಿದ್ದಲ್ಲಿ ತಾವು ಭ್ರಷ್ಟಾಚಾರ ಮಾಡಿದ್ದನ್ನು ಒಪ್ಪಿಕೊಂಡರೆ. ಈ ಬಗ್ಗೆ ತನಿಖೆ ನಡೆಸಲು ಸದನ ಸಮಿತಿ ರಚಿಸಲಿ ಪ್ರಾಮಾಣಿಕವಾಗಿ ಇದ್ದರೆ ಭಯವೇಕೆ?'' ಎಂದು ಪ್ರಶ್ನಿಸಿದ್ದಾರೆ.
''ಪ್ರಧಾನಿ ಮೋದಿ ಒಮ್ಮೆಲ್ಲೇ ಲಾಕ್ಡೌನ್ ಘೋಷಣೆ ಮಾಡಿ ಬಿಟ್ಟರು. ಈಗ ಸೋಂಕು ಹೆಚ್ಚಾದಾಗ ಲಾಕ್ಡೌನ್ ಮಾಡಬೇಕಿತ್ತು. ಆದರೆ ಈಗ ಆರ್ಥಿಕತೆಯ ನೆಪವನ್ನು ಹೇಳುತ್ತಾರೆ. ಅವರಿಗೆ ಜನರ ಜೀವ ಮುಖ್ಯವೇ ಅಲ್ಲ ಆರ್ಥಿಕತೆ ಮುಖ್ಯವೇ'' ಎಂದು ಪ್ರಶ್ನಿಸಿದ ಅವರು ''ನಮ್ಮ ದೇಶದಲ್ಲಿ ಹೆಚ್ಚಿನ ಜನರ ಕೊರೊನಾ ಪರೀಕ್ಷೆ ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ'' ಎಂದು ಆರೋಪಿಸಿದರು.
ಇನ್ನು ಈ ಸಂದರ್ಭದಲ್ಲಿ ತಾವು ಕ್ವಾರಂಟೈನ್ಗೆ ಒಳಗಾಗಿರುವ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಕುರಿತಾಗಿ ಸ್ಪಷ್ಟನೆ ನೀಡಿದ ಅವರು, ''ನಾನು ವಿಶ್ರಾಂತಿ ಪಡೆಯಲಿ ಎಂದು ಮೈಸೂರಿಗೆ ಬಂದಿದ್ದೆ. ಆದರೆ ನೀವು ಏನೆಲ್ಲಾ ಸುದ್ದಿ ಮಾಡಿದ್ದೀರಿ. ಅದಕ್ಕೆ ನಾವು ಬೆಂಗಳೂರಿಗೆ ಹಿಂತಿರುತ್ತೇನೆ'' ಎಂದು ಹೇಳಿದರು.
ಹಾಗೆಯೇ ''ಆನ್ಲೈನ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಮನೋವಿಕಾಸ ಆಗಲ್ಲ'' ಎಂದು ಹೇಳಿದರು.