ನವದೆಹಲಿ, ಜು 09 (DaijiworldNews/PY): ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್)ನ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕೊರೊನಾ ಸೋಂಕಿತರ ಶವಗಳು ಅದಲು ಬದಲಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಗಾಜಿಯಾಬಾದ್ನ ಕೈಲಾಶ್ ನಗರದ ನಿವಾಸಿ, ಕುಸುಮಲತಾ (52) ಅವರು ಅನಾರೋಗ್ಯದ ಕಾರಣ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಭಾನುವಾರ ಸಂಜೆ ನಿಧನರಾಗಿದ್ದು, ನಂತರ ಮರುದಿನ ಬೆಳಿಗ್ಗೆ ಶವವನ್ನು ಕುಸುಮಲತಾ ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿತ್ತು.
ಕುಸುಮಲತಾ ಅವರಿಗೆ ಗಂಟಲ ಮಾದರಿ ಪರೀಕ್ಷೆ ಮಾಡಿದ ಬಳಿಕ ಕೊರೊನಾ ದೃಢಪಟ್ಟಿತ್ತು. ಅವರ ಸಂಬಂಧಿಗಳು ಪಂಜಾಬಿ ಬಾಗ್ ಶ್ಮಶಾನದಲ್ಲಿ ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕುಸುಮಲತಾ ಅವರ ಕುಟುಂಬದವರಿಗೆ ಮಂಗಳವಾರ ಸಂಜೆ ಏಮ್ಸ್ ಆಸ್ಪತ್ರೆಯಿಂದ ಕರೆ ಬಂದಿದ್ದು, ಮೊದಲಿಗೆ ನಾವು ನಿಮಗೆ ಹಸ್ತಾಂತರಿಸಿದ ಶವ ಅಂಜುಮ್ ಎಂಬರದ್ದು ಎಂದು ಹೇಳಿದ್ದಾರೆ. ಈ ವಿಚಾರದಿಂದ ಆತಂಕಗೊಂಡ ಅವರು ಆಸ್ಪತ್ರೆಗೆ ಧಾವಿಸಿ ಬಳಿಕ ಕುಸುಮಲತಾ ಅವರ ಶವ ಪಡೆದು ಅಂತ್ಯಸಂಸ್ಕಾರ ನಡೆಸಿದ್ದಾರೆ. ಈ ವಿಚಾರವಾಗಿ ಸಿಬ್ಬಂದಿಗಳು ಕೂಡಾ ಆ ಶವವು ಬರೇಲಿಯ ನಿವಾಸಿ ಅಂಜುಮ್ ಅವರದ್ದು ಎಂದು ಬಹಿರಂಗಪಡಿಸಿದ್ದಾರೆ.
ಅಜುಂಮ್ ಅವರಿಗೂ ಕೊರೊನಾ ದೃಢವಾಗಿದ್ದು, ಅವರು ಜು 4ರಂದು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜು 6ರಂದು ಬೆಳಿಗ್ಗೆ 11 ಗಂಟೆಗೆ ಅಂಜುಮ್ ಅವರು ಮೃತಪಟ್ಟಿದ್ದಾರೆ. ಆಸ್ಪತ್ರೆಯ ಆಡಳಿತವು ಜು 6ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಆಕೆಯ ಸಾವಿನ ಬಗ್ಗೆ ಅವರ ಸಂಬಂಧಿಕರಿಗೆ ತಿಳಿಸಿದ್ದಾರೆ. ದೆಹಲಿಯ ಸ್ಮಶಾನವೊಂದರಲ್ಲಿ ಶವವನ್ನು ಸಮಾಧಿ ಮಾಡಲು ಕುಟುಂಬವು ಸಿದ್ದತೆ ನಡೆಸಿತ್ತು. ಆದರೆ, ಅವರಿಗೆ ಹಸ್ತಾಂತರಿಸಿದ ಶವವು ಅಂಜುಮ್ ಅವರದಲ್ಲ ಎಂದು ತಿಳಿದ ಕುಟುಂಬಸ್ಥರು ತಕ್ಷಣವೇ ಏಮ್ಸ್ ಆಸ್ಪತ್ರೆಗೆ ಕರೆ ಮಾಡಿ ಈ ಬಗ್ಗೆ ತಿಳಿಸಿದ್ದಾರೆ. ಅಂಜುಮ್ ಅವರ ದೇಹವನ್ನು ಹಿಂದೂ ಆಚರಣೆಗಳ ಪ್ರಕಾರ ಅಂತ್ಯಸಂಸ್ಕರ ಮಾಡಿದ ಬಗ್ಗೆ ಹಾಗೂ ಅಂಜುಮ್ ಅವರ ಶವವನ್ನು ಕುಸುಮಲತಾ ಅವರ ಕುಟುಂಬಕ್ಕೆ ಹಸ್ತಾಂತರ ಮಾಡಿರುವ ಘಟನೆ ತಿಳಿದುಬಂದಿದೆ.
ಘಟನೆಯ ಪರಿಣಾಮ ಏಮ್ಸ್ ಆಡಳಿತವು ಇಬ್ಬರು ಶವಾಗಾರ ನೌಕರರನ್ನು ಅಮಾನತುಗೊಳಿಸಿದೆ. ಈ ಬಗ್ಗೆ ನಿರ್ಲಕ್ಷ್ಯ ಮಾಡಿರುವ ವಿಚಾರವಾಗಿ ಕಾನೂನು ಕ್ರಮಕ್ಕೆ ಒಳಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರಿಗೆ ದೂರು ನೀಡಲಾಗಿದ್ದರೂ ಇನ್ನೂ ಎಫ್ಐಆರ್ ದಾಖಲಾಗಿಲ್ಲ.
ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ಸೋಮನಾಥ ಭಾರ್ತಿ ಅವರು ದೆಹಲಿಯ ಏಮ್ಸ್ ಗೆ ಆಗಮಿಸಿ ಮೃತ ಮಹಿಳೆಯರ ಕುಟುಂಬ ಸದಸ್ಯರನ್ನು ಭೇಟಿಯಾದರು. ಭಾರ್ತಿ ಅವರು ಆಸ್ಪತ್ರೆಯ ಆಡಳಿತದೊಂದಿಗೆ ನಿರ್ಲಕ್ಷ್ಯದ ಬಗ್ಗೆ ಚರ್ಚಿಸಿದ್ದು, ಬಳಿಕ ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ.