ಬೆಂಗಳೂರು, ಜು 09 (DaijiworldNews/PY): ಜುಲೈ 9ರಿಂದ 10ರಂದು ರಾಜ್ಯದ ಕರಾವಳಿ ಹಾಗೂ ಒಳನಾಡು ಭಾಗದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉತ್ತರ ಕನ್ನಡ, ಚಿಕ್ಕಮಗಳೂರು ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಗಂಟೆಗೆ 40ರಿಂದ 50 ಕಿ.ಮೀ ವೇಗದಲ್ಲಿ ಅರಬ್ಬಿ ಸಮುದ್ರದಿಂದ ರಾಜ್ಯದ ಕರಾವಳಿಯ ಕಡೆಗೆ ಗಾಳಿ ಬೀಸುತ್ತಿರುವ ಕಾರಣದಿಂದ ಮುಂದಿನ ಐದು ದಿನಗಳವರೆಗೆ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಎಚ್ಚರಿಕೆ ನೀಡಿದೆ.
ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಲ್ಲಿ ಕೂಡಾ ಅಧಿಕ ಮಳೆಯಾಗುವ ನಿರೀಕ್ಷೆಯಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೂಡುಬಿದರೆ, ಉಡುಪಿ, ಶೃಂಗೇರಿ 7, ಪುತ್ತೂರು, ಕಾರ್ಕಳ, ಸಿದ್ದಾಪುರ 13, ಬೆಳ್ತಂಗಡಿ, ಸುಬ್ರಹ್ಮಣ್ಯ, ತೀರ್ಥಹಳ್ಳಿ 6, ಮಂಕಿ 17, ಕಾರವಾರ, ಬೆಳಗಾವಿ, ನಿಪ್ಪಾಣಿ, ಧಾರವಾಡ, ವಿರಾಜಪೇಟೆ, ಸೊರಬ, ಬೈಲಹೊಂಗಲ, ನರಗುಂದ, ಸಾಗರ, ಹಾಸನ 2, ಕೋಟ 15, ಮಂಗಳೂರು, ಮೂಡಿಗೆರೆ, ಕೊಪ್ಪ 4, ಕೊಲ್ಲೂರು 20 ಸೆ.ಮೀ ಗರಿಷ್ಠ ಮಳೆಯಾಗಿದೆ ಎಂದು ತಿಳಿಸಿದೆ.