ಶ್ರೀನಗರ, ಜು. 09 (DaijiworldNews/MB) : ಉತ್ತರ ಕಾಶ್ಮೀರದ ಬಂಡಿಪೋರ್ ಜಿಲ್ಲೆಯ ಬಿಜೆಪಿ ಜಿಲ್ಲಾ ಅಧ್ಯಕ್ಷ ಶೇಖ್ ವಾಸೀಂ ಬಾರಿ ಸೇರಿದಂತೆ ಅವರ ತಂದೆ ಹಾಗೂ ಸಹೋದರನನ್ನು ಉಗ್ರರು ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ರಕ್ಷಣೆಗೆ ನಿಯೋಜನೆ ಮಾಡಲಾಗಿದ್ದ ಎಂಟು ಮಂದಿ ಪೊಲೀಸರನ್ನು ಬಂಧಿಸಲಾಗಿದೆ.
ಶೇಖ್ ವಾಸೀಂ ಬಾರಿ ನಿವಾಸದ ಬಳಿ ಇದ್ದ ಅಂಗಡಿಯ ಸಮೀಪದಲ್ಲಿ ಉಗ್ರರು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದು ಶೇಖ್ ವಾಸೀಂ ಅವರು ಹಾಗೂ ಅವರ ತಂದೆ ಬಶೀರ್ ಅಹ್ಮದ್ ಬಾರಿ, ಸಹೋದರ ಉಮರ್ ಬಾರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿ ಮಧ್ಯೆಯೇ ಸಾವನ್ನಪ್ಪಿದ್ದರು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೇಖ್ ವಾಸೀಂ ಬಾರಿ ಅವರ ರಕ್ಷಣೆಗೆ ನಿಯೋಜಿಸಿದ್ದ ಎಂಟು ಮಂದಿ ಪೊಲೀಸರನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.
ಇನ್ನು ಈ 8 ಮಂದಿ ಪೊಲೀಸರು ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಮನೆಯ ಕಟ್ಟಡದ ಮೊದಲ ಮಹಡಿಯಲ್ಲಿ ಕುಳಿತಿದ್ದರು ಎಂದು ವರದಿಯಾಗಿದೆ.