ನವದೆಹಲಿ, ಜು 09 (DaijiworldNews/PY): ಸರ್ಕಾರದ ಕ್ರಮದ ವಿಚಾರವಾಗಿ ಅಪಪ್ರಚಾರ ಮಾಡುವ ನಿಟ್ಟಿನಲ್ಲಿ ಕೆಲವರ ಸೂಕ್ತವಾದ ಮಾಹಿತಿ ಇಲ್ಲದೇ ಈ ರೀತಿಯಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಮಾನವ ಸಂಪನ್ಮೂಲ ಸಚಿವ ರಮೇಶ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.
ಕೊರೊನಾ ಕಾರಣಗಳನ್ನು ನೀಡಿ ಕೆಲವು ವಿಷಯಗಳನ್ನು ಸಿಬಿಎಸ್ಇ ಪಠ್ಯಕ್ರಮದಿಂದ ತೆಗೆದುಹಾಕಿರುವ ಬಗ್ಗೆ ಟೀಕೆ ವ್ಯಕ್ತವಾಗುತ್ತಿದ್ದು, ಈ ನಡುವೆ ಸಚಿವರು ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ನಿರ್ದಿಷ್ಟ ಸಿದ್ಧಾಂತವನ್ನು ಪ್ರಚಾರ ಮಾಡಲು ಭಾರತದ ಪ್ರಜಾಪ್ರಭುತ್ವ ಮತ್ತು ಬಹುತ್ವದ ಅಧ್ಯಾಯಗಳನ್ನು ಕೈಬಿಡಲಾಗುತ್ತಿದೆ ಎಂದು ಪ್ರತಿಪಕ್ಷಗಳು ಆರೋಪಿಸಿದ್ದವು.
ಒಂದು ವಿಷಯವನ್ನು ತೆಗೆದುಕೊಂಡು, ಆ ವಿಚಾರವನ್ನು ಭಾವನಾತ್ಮಕವಾಗಿ ಹೇಳಿ ಸತ್ಯವನ್ನು ತಿಳಿಯದಂತೆ ಮಾಡುವ ಯತ್ನವನ್ನು ಸರ್ಕಾರದ ಕ್ರಮವನ್ನು ಟೀಕೆ ಮಾಡುವ ವ್ಯಕತಿಗಳು ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಿಬಿಎಸ್ಇ ಸ್ಪಷ್ಟಪಡಿಸಿದಂತೆ, ಶಾಲೆಗಳಿಗೆ ಎನ್ಸಿಇಆರ್ಟಿ ಪರ್ಯಾಯ ಅಕಾಡೆಮಿಕ್ ಕ್ಯಾಲೆಂಡರ್ ಅನ್ನು ಅನುಸರಿಸಲು ಸೂಚಿಸಲಾಗಿದೆ, ಮತ್ತು ಪ್ರಸ್ತಾಪಿಸಲಾದ ಎಲ್ಲಾ ವಿಷಯಗಳು ಒಂದೇ ಅಡಿಯಲ್ಲಿವೆ ಎಂದಿದೆ.
ಪಠ್ಯಕ್ರಮವನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವ ಮೂಲಕ ವಿದ್ಯಾರ್ಥಿಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಗುರಿಯಾಗಿದೆ. ಇದನ್ನು ವಿವಿಧ ತಜ್ಞರ ಸಲಹೆ ಮತ್ತು ಶಿಫಾರಸುಗಳನ್ನು ಅನುಸರಿಸಿ ಮತ್ತು ನಮ್ಮ ಸಿಲಬಸ್ ಫಾರ್ ಸ್ಟೂಡೆಂಟ್ಸ್ - 2020 ಅಭಿಯಾನದ ಮೂಲಕ ಶಿಕ್ಷಣ ತಜ್ಞರಿಂದ ಪಡೆದ ಸಲಹೆಗಳನ್ನು ಪರಿಗಣಿಸಿ ನಡೆಸಲಾಗಿದೆ ಎಂದು ಅವರು ಹೇಳಿದರು.
ರಾಜಕೀಯವನ್ನು ಶಿಕ್ಷಣದೊಂದಿಗೆ ಸೇರಿಸಬೇಡಿ. ಇದು ನಮ್ಮ ವಿನಮ್ರ ವಿನಂತಿ. ಶಿಕ್ಷಣವು ನಮ್ಮ ಮಕ್ಕಳ ಬಗೆಗಿರುವ ಪವಿತ್ರ ಕರ್ತವ್ಯವಾಗಿದೆ ಎಂದರು.