ನವದೆಹಲಿ, ಜು 09 (DaijiworldNews/PY): ಭಾರತದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಗುರುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ಲೋಬಲ್ ವೀಕ್ - 2020 ಕಾರ್ಯಕ್ರಮವನ್ನು ಉದ್ಘಾಟನೆ ಬಳಿಕ ಮಾತನಾಡಿದ ಅವರು, ವಿಶ್ವದ ಅತ್ಯಂತ ಮುಕ್ತ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಜಗತ್ತಿನ ಎಲ್ಲಾ ಕಂಪೆನಿಗಳಿಗೆ ನಾವು ಹೂಡಿಕೆ ಮಾಡುವ ಸಲುವಾಗಿ ಅವಕಾಶ ಮಾಡಿಕೊಟ್ಟಿದ್ದೇವೆ. ಕೆಲವು ದೇಶಗಳನ್ನು ಹೊರತು ಪಡಿಸಿದರೆ ಈ ಅವಕಾಶ ಎಲ್ಲೂ ಇಲ್ಲ. ಅವಕಾಶಗಳನ್ನು ಹೊಂದಿರುವ ದೇಶದಲ್ಲಿ ಭಾರತವೂ ಇದೆ ಎಂದು ತಿಳಿಸಿದರು.
ಭಾರತದ ವಿವಿಧ ಕ್ಷೇತ್ರಗಳನ್ನು ನೋಡಿದರೆ ಅದರಲ್ಲಿ ಅನೇಕ ಸಾಧ್ಯತೆಗಳೂ ಇವೆ ಅಲ್ಲದೇ, ಅವಕಾಶಗಳು ಇವೆ. ಇದರೊಂದಿಗೆ ಕೃಷಿ ಕ್ಷೇತ್ರದಲ್ಲಿನ ಸುಧಾರಣೆಯು ಸಂಗ್ರಹಣೆ ಹಾಗೂ ಲಾಜಿಸ್ಟಿಕ್ಸ್ನಲ್ಲಿ ಹೂಡಿಕೆ ಮಾಡುವ ನಿಟ್ಟಿನಲ್ಲಿ ಆಕರ್ಷಕವಾದ ಹೂಡಿಕೆಯನ್ನು ಮಾಡಲು ಅವಕಾಶ ಕಲ್ಪಿಸಿದೆ ಎಂದರು.
ಕೊರೊನಾ ಲಸಿಕೆ ಕಂಡುಹಿಡಿದ ಬಳಿಕ ಅದರ ಅಭಿವೃದ್ದಿ ಹಾಗೂ ಉತ್ಪಾದನೆ ಹೆಚ್ಚಿಸುವಲ್ಲಿ ಭಾರತ ಮುಖ್ಯವಾದ ಪಾತ್ರ ವಹಿಸಿದೆ. ಕೊರೊನಾದ ಸಂಕಷ್ಟಕ್ಕೊಳಗಾಗಿ ಪುನರುಜ್ಜೀವನಕ್ಕೆ ಸಾಗುತ್ತಿರುವ ಈ ವೇಳೆಯಲ್ಲಿ ಆರ್ಥಿಕತೆ ಹಾಗೂ ಎಲ್ಲಾ ಸವಾಲುಗಳಿಂದ ಭಾರತ ಹೊರಬರಲಿದೆ ಎಂದು ತಿಳಿಸಿದರು.
ದೇಶದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಾರತದ ಔಷಧಿಯ ಉದ್ಯಮ ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗದೇ ಇಡೀ ಜಗತ್ತಿಗೆ ಅನ್ವಯಿಸುತ್ತದೆ ಎನ್ನುವುದನ್ನು ಕೊರೊನಾ ತೋರಿಸಿದೆ. ಭಾರತವು, ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿನ ಔಷಧದ ಬೆಲೆಯನ್ನು ಕಡಿಮೆ ಮಾಡುವಲ್ಲಿಯೂ ಮುಖ್ಯವಾದ ಕಾರ್ಯವನ್ನು ಮಾಡಿದೆ ಎಂದು ಹೇಳಿದರು.
ಭಾರತೀಯರಿಗೆ ಅಸಾಧ್ಯವಾದುದನ್ನು ಸಾಧಿಸುವ ಮನಸ್ಸಿದೆ. ಭಾರತದ ಆರ್ಥಿಕತೆಯಲ್ಲಿ ಚೇತರಿಕೆಯ ಹಸಿರು ಚಿಗುರೊಡೆಯುತ್ತಿದೆ. ಭಾರತವು ಜಾಗತಿಕ ಒಳಿತಿಗಾಗಿ ಹಾಗೂ ಸಮೃದ್ದಿಯನ್ನು ವೃದ್ದಿಸಲು ಏನು ಬೇಕಾದರು ಮಾಡಲು ತಯಾರಾಗಿದೆ ಎಂದರು.
ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡಿದ ಅವರು, ಆತ್ಮನಿರ್ಭರ ಭಾರತ ಎನ್ನುವುದು ಸ್ವಾವಲಂಬಿ ಹಾಗೂ ಸ್ವಯಂ-ಉತ್ಪಾದನೆ ಅಷ್ಟೆ ಎಂದರು.